ADVERTISEMENT

ಜಿಲ್ಲೆಯ ಹೋಂಸ್ಟೇಯಲ್ಲಿ ರೇವ್‌ ಪಾರ್ಟಿ

ಮಹಾರಾಷ್ಟ್ರ, ಬೆಂಗಳೂರಿನ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 15:08 IST
Last Updated 14 ಜನವರಿ 2019, 15:08 IST
ಬಂಧಿತರಿಂದ ವಶ ಪಡಿಸಿಕೊಂಡ ವಸ್ತುಗಳು
ಬಂಧಿತರಿಂದ ವಶ ಪಡಿಸಿಕೊಂಡ ವಸ್ತುಗಳು   

ಮಡಿಕೇರಿ: ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ‘ಗ್ಲಾಂಪಿಂಗ್‌’ ಹೋಂಸ್ಟೇಯಲ್ಲಿ ರೇವ್‌ ಪಾರ್ಟಿ ಆಯೋಜಿಸುತ್ತಿದ್ದ ಐವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ಜುಡ್‌ ಪರೇರ, ಮುಂಬೈನ ಶಂಕರ್‌ ಶಾಂತನು, ಬೆಂಗಳೂರು ಕೇಂಬ್ರಿಡ್ಜ್‌ ಲೇಔಟ್‌ನ ಸಾಯಿರಾಮ್‌ ರಮೇಶ್‌, ಬೆಂಗಳೂರು ಮತ್ತಿಕೆರೆ ನಿವಾಸಿ ಎಂ.ವಿ.ಈಶ್ವರ್‌, ಹೋಂಸ್ಟೇ ಮಾಲೀಕ ಮಾಳೆಯಂಡ ಎ. ಅಪ್ಪಣ್ಣ ಬಂಧಿತ ಆರೋಪಿಗಳು.

ಬಂಧಿತರಿಂದ 29 ಗ್ರಾಂ ಚರಸ್‌, ಹುಕ್ಕ ಸೇದಲು ಬಳಸುವ ಮೂರು ಸಾಧನ, ಗಾಂಜಾ ಪುಡಿ ಮಾಡಲು ಬಳಸುತ್ತಿದ್ದ ಮೂರು ಸಾಧನ, ರೇವ್‌ ಪಾರ್ಟಿಗೆ ಬಳಸುತ್ತಿದ್ದ ಸಂಗೀತ ಪರಿಕರ, ಜನರೇಟರ್‌, ಮಿನಿ ಲಾರಿ, ಸಿಗರೇಟ್‌ ತಯಾರಿಸಲು ಉಪಯೋಗಿಸುವ ಪೇಪರ್‌ ಹಾಗೂ ಪೊಟ್ಟಣ, ₹ 1.75 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ADVERTISEMENT

ಎಸ್‌ಪಿಗೆ ಬಂದಿತ್ತು ದೂರು: ಜಿಲ್ಲೆಯ ಕೆಲವು ಹೋಂಸ್ಟೇಗಳಲ್ಲಿ ತಡರಾತ್ರಿ ರೇವ್‌ ಪಾರ್ಟಿ ನಡೆಸುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್‌ ಅವರಿಗೆ ದೂರು ಬಂದಿತ್ತು. ಅಪರಾಧ ಪತ್ತೆದಳದ ಸಿಬ್ಬಂದಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಗ್ಲಾಂಪಿಂಗ್‌ ಹೋಂಸ್ಟೇಯಲ್ಲಿ ಮುಂಬೈ, ಪುಣೆ ಹಾಗೂ ಬೆಂಗಳೂರಿನ ವ್ಯಕ್ತಿಗಳು ಶಾಮೀಲಾಗಿ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಪಾರ್ಟಿ ನಡೆಯುತ್ತಿದ್ದಾಗಲೇ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

ತಂಡಕ್ಕೆ ಬಹುಮಾನ:ಕಾರ್ಯಾಚರಣೆಯಲ್ಲಿ ಡಿಸಿಐಬಿಯ ಇನ್‌ಸ್ಪೆಕ್ಟರ್‌ ಎಂ. ಮಹೇಶ್‌, ನಾಪೋಕ್ಲು ಪೊಲೀಸ್ ಠಾಣೆಯ ಪಿಸ್‌ಐ ಎಂ. ನಂಜುಂಡಸ್ವಾಮಿ, ಸಿಬ್ಬಂದಿ ಕೆ.ವೈ.ಹಮೀದ್‌, ಎಂ.ಎನ್‌.ನಿರಂಜನ್‌, ಬಿ.ಎಲ್‌.ಯೋಗೇಶ್‌ ಕುಮಾರ್‌, ವಿ.ಜಿ.ವೆಂಕಟೇಶ್‌, ಕೆ.ಆರ್‌.ವಸಂತ, ಗ್ರಾಮಾಂತರ ಠಾಣೆಯ ಶಿವರಾಮೇಗೌಡ, ದಿನೇಶ್‌, ಅವಿನಾಶ್, ರಾಜೇಶ್‌, ಗಿರೀಶ್‌, ಶಶಿಕುಮಾರ್ ಪಾಲ್ಗೊಂಡಿದ್ದರು. ಈ ತಂಡಕ್ಕೆ ಎಸ್‌ಪಿ ಬಹುಮಾನ ಘೋಷಿಸಿದ್ದಾರೆ.

ಮಾಹಿತಿ ನೀಡಿ: ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ಕಾರ್ಯಾಚರಿಸುತ್ತಿದೆ. ಗಾಂಜಾ ಅಥವಾ ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ಗಸ್ತು ಪೊಲೀಸರಿಗೆ ಮಾಹಿತಿ ನೀಡಬಹುದು. ಅಲ್ಲದೇ, ಜಿಲ್ಲೆಯ 30 ಸ್ಥಳಗಳಲ್ಲಿ ಸಲಹಾ ‍ಪೆಟ್ಟಿಗೆ ಇಟ್ಟಿದ್ದು ಅಕ್ರಮಗಳ ಬಗ್ಗೆ ಮಾಹಿತಿ ನೀಡಬಹುದು. ಆ ಪತ್ರದಲ್ಲಿ ತಮ್ಮ ವಿಳಾಸ, ಹೆಸರು ಬರೆಯುವ ಅಗತ್ಯವಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.