ADVERTISEMENT

ಕೈಲ್‌ ಮುಹೂರ್ತದ ಸಂಭ್ರಮ

ಬಂದೂಕು–ಕೃಷಿ ಪರಿಕರಗಳಿಗೆ ಪೂಜೆ: ಹಬ್ಬದಲ್ಲಿ ವಿಶೇಷ ಭೋಜನ ಕೂಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 14:45 IST
Last Updated 3 ಸೆಪ್ಟೆಂಬರ್ 2019, 14:45 IST
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೈಲ್‌ ಮುಹೂರ್ತ ಹಬ್ಬದ ಪ್ರಯುಕ್ತ ಭಾಗಮಂಡಲ ಸಮೀಪದ ದೇವಾಟ್ ಪರಂಬ್ ನರಮೇಧ ದುರಂತ ಸಮಾಧಿ ಸ್ಥಳದಲ್ಲಿ ಗೌರವ ಸಲ್ಲಿಸಲಾಯಿತು
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೈಲ್‌ ಮುಹೂರ್ತ ಹಬ್ಬದ ಪ್ರಯುಕ್ತ ಭಾಗಮಂಡಲ ಸಮೀಪದ ದೇವಾಟ್ ಪರಂಬ್ ನರಮೇಧ ದುರಂತ ಸಮಾಧಿ ಸ್ಥಳದಲ್ಲಿ ಗೌರವ ಸಲ್ಲಿಸಲಾಯಿತು   

ಮಡಿಕೇರಿ: ಕೊಡವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೈಲ್‌ ಮುಹೂರ್ತವನ್ನು ಮಂಗಳವಾರ ಜಿಲ್ಲೆಯ ವಿವಿಧೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಪ್ರಕೃತಿ ವಿಕೋಪದ ನೋವಿನ ನಡುವೆಯೂ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಿದರು. ಭತ್ತ ಬೆಳೆವ ಎಲ್ಲ ಕೆಲಸಗಳು ಮುಗಿಯುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ತಂಬಿಟ್ಟು, ಕಡುಂಬಿಟ್ಟು, ರೊಟ್ಟಿ, ಹೋಳಿಗೆ, ಕೇಸರಿಬಾತ್‌, ಮಾಂಸದ ಅಡುಗೆ ಮಾಡಿ ಸವಿದರು.

ಸಮೀಪದ ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್ ಮನೆಯಲ್ಲೂ ಹಬ್ಬದ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ADVERTISEMENT

ಹಿರಿಯರಾದ ಪುತ್ತರಿರ ಸಾಬು ಬೋಪಯ್ಯನವರು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟ ಆಯುದ್ಧಗಳಿಗೆಲ್ಲ ಪೂಜೆ ಸಲ್ಲಿಸಿದರು. ಕತ್ತಿ, ಗುದ್ದಲಿ, ನೇಗಿಲು ಸೇರಿದಂತೆ ಕೃಷಿ ಪರಿಕರಗಳನ್ನು ಪೂಜಿಸಿದರು.

ಕುಟುಂಬಸ್ಥರು ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದರು. ನಂತರ ಹಬ್ಬದ ವಿಶೇಷ ಭೋಜನವನ್ನು ಎಲ್ಲರೂ ಸವಿದರು.

ಕೊಡವರ ಸಾಂಪ್ರದಾಯಿಕ ಆಯುಧವಾದ ಕೋವಿ, ಒಡಿಕತ್ತಿ ಹಾಗೂ ಇನ್ನಿತರ ಆಯುಧಗಳನ್ನು ಇಟ್ಟು ಅದಕ್ಕೆ ವಿಶೇಷ ಪಟ್ಟ ತೋಕ್ ಪೂಗಂಧದ ಬೊಟ್ಟನ್ನಿಟ್ಟು, ಅದರ ಮುಂದೆ ಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಭೋಜನವನ್ನಿಟ್ಟು ಕುಟುಂಬದ ಹಿರಿಯರು ಪೂಜೆ ಸಲ್ಲಿಸಿದರು.

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಬ್ಬದ ಪ್ರಯುಕ್ತ ಭಾಗಮಂಡಲ ಸಮೀಪದ ದೇವಾಟ್ ಪರಂಬ್ ನರಮೇಧ ದುರಂತ ಸಮಾಧಿ ಸ್ಥಳದಲ್ಲಿ ಗೌರವ ಸಲ್ಲಿಸಲಾಯಿತು.

‘ಕೊಡವ ನೆಲದ ಮೇಲೆ ನಡೆದ ಟಿಪ್ಪು ಸುಲ್ತಾನ್‌ ತನಗಾದ ಅಪಮಾನಕರ ಸೋಲಿನ ಸೇಡು ತೀರಿಸಲು ದೇವಾಟ್ ಪರಂಬ್‌ಗೆ ಬಂದು ಜಮಾಯಿಸಿದ ಮುಗ್ದ ಕೊಡವರ ಸಾಮೂಹಿಕ ನರಮೇಧಗೊಳಿಸಿದ್ದ’ ಎಂದು ಸಿಎನ್‌ಸಿ ಅಧ್ಯಕ್ಷ ನಾಚಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.