ADVERTISEMENT

ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆ, ಪಾದಚಾರಿ ಮಾರ್ಗವೂ ಒತ್ತುವರಿ

ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳದ ವರ್ತಕರು, ಕಳಪೆ ಕಾಮಗಾರಿಯ ಆರೋಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 15:40 IST
Last Updated 30 ನವೆಂಬರ್ 2019, 15:40 IST
ಪಾದಚಾರಿ ರಸ್ತೆಯಲ್ಲಿ ವರ್ತಕರು ಸರಕನ್ನು ಮಾರಾಟಕ್ಕೆ ಇಟ್ಟಿರುವ ದೃಶ್ಯ  
ಪಾದಚಾರಿ ರಸ್ತೆಯಲ್ಲಿ ವರ್ತಕರು ಸರಕನ್ನು ಮಾರಾಟಕ್ಕೆ ಇಟ್ಟಿರುವ ದೃಶ್ಯ     

ವಿರಾಜಪೇಟೆ: ಪಟ್ಟಣಕ್ಕೆ ಸಂಬಂಧಿಸಿದಂತೆ ಈಗಿನ ಬಹುಚರ್ಚಿತ ವಿಚಾರವೆಂದರೆ ಮುಖ್ಯರಸ್ತೆ ವಿಸ್ತರಣೆ. ಪರ- ವಿರೋಧದ ನಡುವೆ ರಸ್ತೆ ವಿಸ್ತರಣೆಯಾಗುತ್ತೊ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ, ಇದರೊಂದಿಗೆ ಥಳುಕು ಹಾಕಿಕೊಂಡಂತೆ ಪಟ್ಟಣವನ್ನು ಕಾಡುತ್ತಿರುವ ಸಮಸ್ಯೆಗಳೆಂದರೆ ವಾಹನ ನಿಲುಗಡೆ ಹಾಗೂ ಪಾದಚಾರಿ ರಸ್ತೆಗಳ ದುಸ್ಥಿತಿಯೇ ಆಗಿದೆ.

ಕಿರಿದಾದ ರಸ್ತೆಯಿಂದ ಪಟ್ಟಣದ ವ್ಯಾಪ್ತಿಯ ಹಲವೆಡೆ ಪಾದಚಾರಿ ರಸ್ತೆಯೇ ಇಲ್ಲ! ಕೆಲವೆಡೆ ರಸ್ತೆಯ ಬದಿಯ ಚರಂಡಿಗೆ ಅಂಟಿಕೊಂಡಂತೆ ಹಳೆಯ ಕಟ್ಟಡಗಳಿವೆ; ಕೆಲವು ಭಾಗದಲ್ಲಿ ಚರಂಡಿಯ ಮೇಲ್ಭಾಗಕ್ಕೆ ಸ್ಲ್ಯಾಬ್ ಕೂಡ ಇಲ್ಲ. ಇನ್ನು ಕೆಲವು ಭಾಗಗಳಲ್ಲಿ ಜಾಗವಿದ್ದರೂ ಮೊನಚಾದ ಕಲ್ಲುಗಳಿಂದ ಸಂಚರಿಸುವುದೇ ಅಸಾಧ್ಯವಾಗಿದೆ. ಮತ್ತೆ ಕೆಲವೆಡೆ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದ್ದರೂ, ಕಾಮಗಾರಿ ಕಳಪೆಯಾಗಿರುವುದರಿಂದ ಅಂಕುಡೊಂಕಾಗಿವೆ. ಮತ್ತೆ ಕೆಲವೆಡೆ ಅಳವಡಿಸಿರುವ ಸ್ಲ್ಯಾಬ್‌ಗಳು ಅಪಾಯಕಾರಿ ಸ್ಥಿತಿಯಲ್ಲಿವೆ.

ಇನ್ನು ಉಳಿದಂತೆ ಪಟ್ಟಣ ಪ್ರಮುಖ ಭಾಗದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಪಾದಚಾರಿ ರಸ್ತೆಗಳನ್ನು ಕೆಲ ವರ್ತಕರು ಒತ್ತುವರಿ ಮಾಡಿಕೊಂಡಿರುವುದು ನಿತ್ಯದ ಕತೆಯಾಗಿದೆ. ಜನರ ತೆರಿಗೆ ಹಣದಿಂದ ಪಟ್ಟಣ ಪಂಚಾಯಿತಿ ವತಿಯಿಂದ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಪಾದಚಾರಿ ಮಾರ್ಗಕ್ಕೆ ಹಾಕಿರುವ ತಡೆಕಂಬಿಗಳನ್ನು ಕೆಲ ವರ್ತಕರು ತಮ್ಮ ಅಂಗಡಿಯ ವಸ್ತುಗಳನ್ನು ಇಡಲು ಬಳಸಿಕೊಂಡಿದ್ದಾರೆ. ಇದಕ್ಕೆ ಹಿಂದಿನಿಂದಲೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಪ್ರಯೋಜವಾಗಿಲ್ಲ. ಉಳಿದಂತೆ ಇರುವ ಪಾದಚಾರಿ ರಸ್ತೆಗಳು ಕೇವಲ 2ರಿಂದ 3 ಅಡಿಯಷ್ಟು ಮಾತ್ರ ಅಗಲವಿದ್ದು ಇಕ್ಕಟಾಗಿದೆ. ನಿಯಮದಂತೆ ಕನಿಷ್ಠ 5 ಅಡಿಯಷ್ಟು ಪಾದಚಾರಿ ರಸ್ತೆಯಿರಬೇಕಾಗಿತ್ತು.

ADVERTISEMENT

‘ಪಟ್ಟಣದ ವ್ಯಾಪ್ತಿಯಲ್ಲಿರುವ ಪಾದಚಾರಿ ಮಾರ್ಗವು ಉತ್ತಮ ಸ್ಥಿತಿಯಲ್ಲಿಲ್ಲ. ಕೆಲವೆಡೆ ಪಾದಚಾರಿ ಮಾ‌ರ್ಗವೇ ಇಲ್ಲ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿಯೇ ಓಡಾಡುವಂತಾಗಿದೆ. ಪಾದಚಾರಿ ಮಾರ್ಗವನ್ನು ಕೆಲ ವರ್ತಕರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ಪಂಚಾಯಿತಿ ಕೂಡಲೇ ತೆರವುಗೊಳಿಸಬೇಕು. ಪಟ್ಟಣದ ಮುಖ್ಯರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡಗಳ ಮುಂಭಾಗದ ಜಾಗದಲ್ಲಿ ಸಾರ್ವಜನಿಕರು ವಾಹನ ನಿಲ್ಲಿಸದಂತೆ ಕೆಲ ಕಟ್ಟಡಗಳ ಮಾಲೀಕರು ಗೇಟ್‌ಗಳನ್ನು ಬಳಸಿ ತಡೆ ಹಾಕಿರುವುದು ಸರಿಯಲ್ಲ. ವಾಣಿಜ್ಯ ಕಟ್ಟಡಗಳ ಮುಂಭಾಗದಲ್ಲಿ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶ ನೀಡಬೇಕು’ ಎನ್ನುತ್ತಾರೆ ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್.

ಕೆಲವು ವಾಣಿಜ್ಯ ಕಟ್ಟಡಗಳ ಮಾಲೀಕರು ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗುವುದು ಎಂದು ಪಂಚಾಯಿತಿಯಿಂದ ಅನುಮತಿ ಪಡೆದುಕೊಂಡು, ಇದೀಗ ನೆಲಮಹಡಿಯನ್ನು ಅಂಗಡಿ ಮಳಿಗೆಗೆ ಬಾಡಿಗೆ ನೀಡಿದ್ದಾರೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.

’ಪಟ್ಟಣದ ಪಾದಚಾರಿ ಮಾರ್ಗದಲ್ಲಿ ಕೆಲ ವರ್ತಕರು ಸರಕು ಸಾಮಾನುಗಳನ್ನು ಇಡುವ ಮೂಲಕ ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಪಟ್ಟಣದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಕಟ್ಟಡವನ್ನು ನಿರ್ಮಿಸುವಾಗ ರಸ್ತೆಯ ಅಂಚಿನಿಂದ 6 ಮೀಟರ್‌ ಜಾಗವನ್ನು ವಾಹನ ನಿಲುಗಡೆಗೆ ಬಿಡಬೇಕು. ಇಲ್ಲವೇ ಕಟ್ಟಡದ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಕೆಲವು ಕಟ್ಟಡಗಳ ಮಾಲೀಕರು ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶವನ್ನು ನೀಡುವುದಾಗಿ ಹೇಳಿ, ಬಳಿಕ ಅಲ್ಲಿಯು ಅಂಗಡಿ ಮಳಿಗೆಗೆ ಅವಕಾಶ ನೀಡಿರುವುದು ಕಂಡುಬಂದಿದೆ. ಸುಮಾರು 7 ಕಟ್ಟಡಗಳಿಗೆ ಈ ಕುರಿತು ನೋಟಿಸ್ ನೀಡಿದ್ದು, 30 ದಿನಗಳ ಕಾಲಾವಕಾಶ ನೀಡಲಾಗಿದೆ. ಅದರಲ್ಲಿ 2 ಕಟ್ಟಡಗಳ ಮಾಲೀಕರು ಕೆಲ ದಿನಗಳಲ್ಲೇ ವಾಹನ ನಿಲುಗಡೆಗೆ ಅವಕಾಶ ನೀಡುವುದಾಗಿ ಈಗಾಗಲೇ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.