ADVERTISEMENT

ಭೂಕಂದಾಯ ಕಾಯ್ದೆ: ಕೊಡಗು ಜಿಲ್ಲೆಯಲ್ಲಿ 6,537 ಅರ್ಜಿ 

ಬಾಕಿ ಅರ್ಜಿ ಶೀಘ್ರ ವಿಲೇವಾರಿ– ಹಕ್ಕುಪತ್ರ ವಿತರಣೆ: ಸಚಿವರ ಭರವಸೆ 

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:09 IST
Last Updated 18 ಡಿಸೆಂಬರ್ 2018, 12:09 IST
ಕೆ.ಜಿ. ಬೋಪಯ್ಯ
ಕೆ.ಜಿ. ಬೋಪಯ್ಯ   

ಮಡಿಕೇರಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ಭೂಕಂದಾಯ ಕಾಯ್ದೆಯಲ್ಲಿ ಇದುವರೆಗೆ ಎಷ್ಟು ಅರ್ಜಿಗಳು ಸ್ವೀಕೃತವಾಗಿವೆ ಎಂದು ಪ್ರಶ್ನಿಸಿದ್ದು, ಅದಕ್ಕೆ ಕಂದಾಯ ಸಚಿವರು ಈ ಕೆಳಗಿನಂತೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 94‘ಸಿ’ ಅಡಿಯಲ್ಲಿ ಇದುವರೆಗೆ ಮಡಿಕೇರಿ 2,432, ವಿರಾಜಪೇಟೆಯಲ್ಲಿ 4,106 ಸೇರಿ ಒಟ್ಟು 6,537 ಅರ್ಜಿಗಳು ಸ್ವೀಕೃತವಾಗಿವೆ. ಮಡಿಕೇರಿ 1,658, ವಿರಾಜಪೇಟೆಯಲ್ಲಿ 1,268 ಅರ್ಜಿಗಳು ತಿರಸ್ಕೃತಗೊಂಡಿವೆ.

ಮಡಿಕೇರಿಯಲ್ಲಿ 472, ವಿರಾಜಪೇಟೆಯಲ್ಲಿ 1,641 ಸೇರಿ ಒಟ್ಟು 2,113 ಅರ್ಜಿಗಳು ಮಂಜೂರಾಗಿವೆ. ಮಡಿಕೇರಿಯಲ್ಲಿ 2,130, ವಿರಾಜಪೇಟೆಯಲ್ಲಿ 2,909 ಅರ್ಜಿಗಳು ವಿಲೇವಾರಿಯಾಗಿವೆ. ಮಡಿಕೇರಿಯಲ್ಲಿ 472, ವಿರಾಜಪೇಟೆಯಲ್ಲಿ 1,586 ಅರ್ಜಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ನೀಡಲು ಬಾಕಿಯಿರುವ ಅರ್ಜಿಗಳು 55. ವಿಲೇವಾರಿಯಾಗದೇ ಬಾಕಿ ಇರುವ ಅರ್ಜಿಗಳು ಒಟ್ಟು 1,498.

ADVERTISEMENT

94‘ಸಿಸಿ’ ಅಡಿಯಲ್ಲಿ ಸ್ವೀಕೃತ ಅರ್ಜಿ

ಮಡಿಕೇರಿ 475, ವಿರಾಜಪೇಟೆಯಲ್ಲಿ 29 ಸೇರಿ ಒಟ್ಟು 504 ಅರ್ಜಿಗಳು ಸ್ವೀಕೃತವಾಗಿವೆ. ಮಡಿಕೇರಿ 281 ಅರ್ಜಿಗಳು ತಿರಸ್ಕೃತಗೊಂಡಿವೆ. ಮಡಿಕೇರಿಯಲ್ಲಿ 115 ಅರ್ಜಿಗಳು ಮಂಜೂರಾಗಿವೆ. ಮಡಿಕೇರಿಯಲ್ಲಿ 396 ಅರ್ಜಿಗಳು ವಿಲೇವಾರಿಯಾಗಿವೆ. ಮಡಿಕೇರಿಯಲ್ಲಿ 37 ಮಂಜೂರಾದ ಅರ್ಜಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಹಕ್ಕುಪತ್ರ ನೀಡಲು ಬಾಕಿಯಿರುವ ಅರ್ಜಿಗಳು 78. ವಿಲೇವಾರಿಯಾಗದೇ ಬಾಕಿ ಇರುವ ಅರ್ಜಿಗಳು ಒಟ್ಟು 108 ಆಗಿದೆ.

ಬಾಕಿಯಿರುವ ಅರ್ಜಿಗಳನ್ನು ಇತ್ಯರ್ಥ ಮಾಡಿ ಹಕ್ಕುಪತ್ರ ನೀಡಲಾಗುವುದು. 94‘ಸಿ’ ಅಡಿಯಲ್ಲಿ 1498 ಅರ್ಜಿಗಳು ಮತ್ತು 94 ‘ಸಿಸಿ’ ಅಡಿಯಲ್ಲಿ 108 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಶೀಘ್ರವಾಗಿ ವಿಲೇವಾರಿ ಮಾಡಿ ಮಂಜೂರಾದ ಪ್ರಕರಣಗಳಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ವೀಣಾ ಅಚ್ಚಯ್ಯ ಮನವಿ: ಪ್ರವಾಹ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಇಲಾಖೆಯಿಂದ ವಿಶೇಷ ಅನುದಾನ ಒದಗಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆಯೇ ಎಂದು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಲ್ಲಿ ಪ್ರಶ್ನಿಸಿದರು.

ವಿರಾಜಪೇಟೆ, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಕಟ್ಟಡಗಳಿಗೆ ಹಾನಿಯಾಗಿದ್ದು, ಈ ನಿಲಯಗಳ ಕಟ್ಟಡಗಳಿಗೆ ದುರಸ್ತಿ ಕಾರ್ಯ ಕೈಗೊಳ್ಳಲು ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಯಿಂದ ಅಂದಾಜು ಪಟ್ಟಿ ಬಂದ ನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಾದ ಮಡಿವಾಳ, ಸವಿತಾ, ಕುಂಬಾರ ಮುಂತಾದ ಹಿಂದುಳಿದ ವರ್ಗಗಳಿಗೆ ಸೇರಿದ ₹ 2 ಸಾವಿರ ಸಂತ್ರಸ್ತರಿಗೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ₹ 10 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.