ADVERTISEMENT

‘ನಿಕ್ಷಯ್ ಮಿತ್ರ’ದಲ್ಲಿ ನೋಂದಣಿಯಾದವರು 19 ಮಾತ್ರ!

ಕೊಡಗು ಜಿಲ್ಲೆಯಲ್ಲಿರುವ ಕ್ಷಯ ರೋಗಿಗಳ ಸಂಖ್ಯೆ 195

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 17:08 IST
Last Updated 18 ಸೆಪ್ಟೆಂಬರ್ 2022, 17:08 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 195 ಕ್ಷಯರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 136 ಕ್ಷಯರೋಗಿಗಳು ಪೌಷ್ಟಿಕ ಅಹಾರ ಹಾಗೂ ಸಮುದಾಯದ ಬೆಂಬಲ ಪಡೆಯಲು ಒಪ್ಪಿಗೆ ನೀಡಿದ್ದಾರೆ. ಅವರಲ್ಲಿ 19 ರೋಗಿಗಳಿಗೆ ಮಾತ್ರವೇ ಪೌಷ್ಟಿಕ ಆಹಾರ ನೀಡಲು ‘ನಿಕ್ಷಯ್ ಮಿತ್ರ’ದಲ್ಲಿ ದಾನಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮಡಿಕೇರಿ ಘಟಕವು 10 ಕ್ಷಯರೋಗಿಗಳಿಗೆ ಪೌಷ್ಟಿಕ ಅಹಾರ ನೀಡಲು ನೋಂದಾಯಿಸಿಕೊಂಡಿದೆ. ಉಳಿದಂತೆ, 9 ರೋಗಿಗಳಿಗೆ ಪೌಷ್ಟಿಕ ಅಹಾರ ನೀಡಲು ಸಾರ್ವಜನಿಕರು ಮುಂದೆ ಬಂದಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆನಂದ್ ತಿಳಿಸಿದ್ದಾರೆ. ಉಳಿದವರಿಗೆ ಪೌಷ್ಟಿಕ ಆಹಾರ ನೀಡಲು ಸಾರ್ವಜನಿಕರು, ಸಂಘ, ಸಂಸ್ಥೆಗಳು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಏನಿದು ‘ನಿಕ್ಷಯ್ ಮಿತ್ರ’

ADVERTISEMENT

ಭಾರತವನ್ನು 2025 ರ ವೇಳೆಗೆ ಕ್ಷಯ ಮುಕ್ತವನ್ನಾಗಿಸುವ ಮಹತ್ತರ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಅಭಿಯಾನದಡಿಯಲ್ಲಿ ಪ್ರತಿಯೊಬ್ಬ ಕ್ಷಯರೋಗಿಯನ್ನು ಅವರ ಚಿಕಿತ್ಸೆಯ ಸಂದರ್ಭದಲ್ಲಿ ದತ್ತು ಪಡೆದುಕೊಂಡು ಅವರಿಗೆ ಬೇಕಾದ ಪೌಷ್ಟಿಕ ಅಹಾರ, ಚಿಕಿತ್ಸೆ ಮತ್ತು ಬೆಂಬಲ, ಕೌಶಲ್ಯಾಧರಿತ ತರಬೇತಿ ಹಾಗೂ ಹೆಚ್ಚುವರಿ ಪೌಷ್ಟಿಕ ಪೂರಕ ಅಹಾರ ನೀಡಲು ಸಹಕಾರ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು, ಇತರ ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಉದ್ಯಮಿಗಳು ಹಾಗೂ ಇತರೆ ದಾನಿಗಳು ಕನಿಷ್ಠ 1ರಿಂದ 3 ವರ್ಷಗಳ ಅವಧಿಗೆ ‘ನಿಕ್ಷಯ್ ಮಿತ್ರ’ರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಜಿಲ್ಲೆಯ ದಾನಿಗಳು, ಸಹಕಾರ ಸಂಘಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಕಾಫಿ ಬೆಳೆಗಾರರು ಹಾಗೂ ಇತರ ಸಾರ್ವಜನಿಕರು ಈ ಕಾರ್ಯದಲ್ಲಿ ಕೈಜೋಡಿಸಿ ‘ಪ್ರಧಾನಮಂತ್ರಿ ಟಿ.ಬಿ. ಮುಕ್ತ ಭಾರತ ಅಭಿಯಾನ’ದ ಯಶಸ್ವಿಗೆ ಸಹಕರಿಸಬಹುದು. ‘ನಿಕ್ಷಯ್ ಮಿತ್ರ’ ನೋದಣಿಗಾಗಿ https://communitysupport.nikshay.in ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂ: 08272- 221292 ಅಥವಾ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಮೊ: 94498 43234ನ್ನು ಸಂಪರ್ಕಿಸಬಹುದು.

ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಕ್ಷಯರೋಗಿಗಳಿಗೆ ಪೌಷ್ಠಿಕ ಅಹಾರ ನೀಡಲು ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು, ‘ನಿಕ್ಷಯ್‌ ಮಿತ್ರ’ರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಡಾ.ಆನಂದ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.