ಶನಿವಾರಸಂತೆ: ಹೋಬಳಿ ವ್ಯಾಪ್ತಿಯಲ್ಲಿಯೂ ಬಸ್‌ನಿಲ್ದಾಣದ ಕೊರತೆ ಸಾರ್ವಜನಿಕರನ್ನು ಕಾಡುತ್ತಿದ್ದು, ಬಸ್‌ನಿಲ್ದಾಣ ಎಂಬುದು ಈ ಭಾಗದಲ್ಲಿ ಮರೀಚಿಕೆ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶನಿವಾರಸಂತೆ ಪಟ್ಟಣದಲ್ಲಿ ಬಸ್‌ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ಒಂದಿಷ್ಟು ಸಮಾಧಾನ ತರಿಸಿದ್ದರೂ, ಇನ್ನುಳಿದ ಕಡೆ ಜನರು ಮಳೆಯಲ್ಲೇ ಬಸ್‌ಗಾಗಿ ನಿಲ್ಲಬೇಕಾಗಿದೆ. ಇನ್ನೆಷ್ಟು ದಿನ ಮಳೆಯಲ್ಲೇ ನೆನೆಯುತ್ತ ಬಸ್‌ಗಾಗಿ ನಿಲ್ಲಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಶನಿವಾರಸಂತೆ ಪಟ್ಟಣ ಸಂತೆ ವ್ಯಾಪಾರಕ್ಕೆ ಹೆಸರುವಾಸಿ. ಉತ್ತರ ಕೊಡಗಿನ ಗಡಿ ಭಾಗದಲ್ಲಿರುವ ಈ ಪಟ್ಟಣವನ್ನೇ ಹಾಸನ ಜಿಲ್ಲೆಯ ಗಡಿ ಪ್ರದೇಶದ ಜನರೂ ತಮ್ಮ ವ್ಯವಹಾರ ಚಟುವಟಿಕೆಗಳಿಗೆ ಅವಲಂಬಿಸಿದ್ದಾರೆ. ಆದರೆ, ಶನಿವಾರಸಂತೆಗೆ ಆಗಮಿಸುವ ಪ್ರಯಾಣಿಕರು ಬಸ್ ನಿಲ್ದಾಣವಿಲ್ಲದೆ ಪರದಾಡುತ್ತಿದ್ದರು.
ಬಸ್ ನಿಲ್ದಾಣದ ಅವಶ್ಯಕತೆ ಕಂಡ ಶಾಸಕ ಡಾ.ಮಂತರ್‌ಗೌಡ, ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ನೀಡಿದ ಭರವಸೆಯಂತೆ ಬಸ್‌ನಿಲ್ದಾಣದ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಅದೀಗ ನಿರ್ಮಾಣದ ಹಂತದಲ್ಲಿ ಇದೆ.
ಪಟ್ಟಣದ ಐಬಿ ರಸ್ತೆಯ ಪ್ರವಾಸಿ ಮಂದಿರದ ಬಳಿ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ನಿತ್ಯ ರಾತ್ರಿ ವೇಳೆ 4 ಸಾರಿಗೆ ಬಸ್‌ಗಳು ತಂಗುತ್ತಿವೆ. ಮುಂಜಾನೆ 4 ಗಂಟೆಯಿಂದ ಬಸ್‌ಗಳು ಸಂಚಾರವನ್ನು ಪ್ರಾರಂಭಿಸುತ್ತವೆ. ಬಸ್‌ಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಿಲ್ಲುತ್ತಿವೆ. ಮುಂಜಾನೆ ಹೊತ್ತಿನಲ್ಲಿ ಪ್ರಯಾಣಿಕರು ಬಸ್ ಅನ್ನು ಹತ್ತುವ ವೇಳೆ ಬಸ್‌ನಿಲ್ದಾಣ ಇಲ್ಲದೆ ಬೀದಿ ನಾಯಿಗಳ ಹಾವಳಿಯಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗ ಇರುವ ಶೌಚಾಲಯವು ಇದ್ದರೂ ಕಣ್ಣಿಗೆ ಕಾಣದಂತಿದೆ. ಇನ್ನು ಚಾಲಕರು ಮತ್ತು ನಿರ್ವಾಹಕರು ತಮ್ಮ ನಿತ್ಯ ಕರ್ಮಗಳನ್ನು ಪೂರೈಸಲು ಸೆಸ್ಕ್ ಸಂಸ್ಥೆಯ ಶೌಚಾಲಯವನ್ನು ಬಳಸುತ್ತಿದ್ದಾರೆ.
ಈಗ ಬಸ್ ನಿಲ್ದಾಣವಿಲ್ಲದೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಲ್ಲೆಂದರಲ್ಲಿ ಬಸ್‌ಗಳು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರು ತಮ್ಮ ಬಸ್‌ಗಳಲ್ಲಿ ಪ್ರಯಾಣ ಮಾಡಲು ಕಷ್ಟಕರವಾಗಿದೆ. ಶನಿವಾರಸಂತೆಗೆ ಬರುವ ಹೊಸ ಪ್ರಯಾಣಿಕರಿಗೆ ತಾವು ಹೋಗುವ ಊರುಗಳ ಬಸ್‌ಗಳು ಯಾವ ದಿಕ್ಕಿನಲ್ಲಿ ಬಂದು ನಿಲ್ಲುತ್ತವೆ ಎಂಬುದು ತಿಳಿಯದೇ ಅವರು ಪರದಾಡುತ್ತಿದ್ದಾರೆ. ಮಳೆಗಾಲದಲ್ಲಿ ಪ್ರಯಾಣಿಕರು ಅಂಗಡಿಗಳ ಮುಂಭಾಗದಲ್ಲಿ ನಿಂತು ಬಸ್‌ಗಾಗಿ ಕಾಯಬೇಕಿದೆ. ಇದರಿಂದ ವರ್ತಕರು ತಮ್ಮ ವ್ಯಾಪಾರ ಚಟುವಟಿಕೆಗಳಿಗೆ ಅನಾನುಕೂಲವಾಗುತ್ತದೆ ಎಂದು ಪ್ರಯಾಣಿಕರನ್ನು ನಿಂದಿಸುತ್ತಿರುತ್ತಾರೆ. ಶನಿವಾರ ಸಂತೆಯ ಸಾರ್ವಜನಿಕರು ಈ ಎಲ್ಲಾ ಅನಾನುಕೂಲಗಳು ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಆದರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾತ್ರ ನಿರ್ಮಾಣವಾಗುತ್ತಿದೆ. ಪಟ್ಟಣಕ್ಕೆ ಅತಿ ಹೆಚ್ಚಾಗಿ ಸಂಪರ್ಕ ಕಲ್ಪಿಸುವ ಖಾಸಗಿ ಬಸ್‌ಗಳು ಎಲ್ಲಿ ನಿಲ್ಲಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಕೊಡ್ಲಿಪೇಟೆಗೆ ಬೇಕು ಸುಸಜ್ಜಿತ ಬಸ್‌ನಿಲ್ದಾಣ
ಕೊಡಗಿನ ಗಡಿ ಭಾಗ ಕೊಡ್ಲಿಪೇಟೆ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಬಸ್ ನಿಲ್ಲುವ ವ್ಯವಸ್ಥೆ ಇದೆ. ಆದರೆ ಪ್ರಯಾಣಿಕರು ಬಸ್ ಹತ್ತಲು ಇಳಿಯಲು ಸೂಕ್ತ ವ್ಯವಸ್ಥೆ ಸಮರ್ಪಕವಾಗಿಲ್ಲ. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದಟ್ಟಣೆಯು ಹೆಚ್ಚಾಗಿದ್ದು ಬಸ್ ಚಾಲಕರು ತಮ್ಮ ಬಸ್‌ಗಳನ್ನು ನಿಲ್ಲಿಸಲು ಅನಾನುಕೂಲವಾಗುತ್ತಿದೆ. ದೂರದ ಊರಿನಿಂದ ಬರುವ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಅತ್ಯವಶ್ಯಕ. ಆದರೆ ಸಾರ್ವಜನಿಕ ಶೌಚಾಲಯ ದೂರದಲ್ಲಿದ್ದು ಪ್ರಯಾಣಿಕರು ಬಳಸಲು ಸಾಧ್ಯವಾಗುತ್ತಿಲ್ಲ. ತಕ್ಷಣದಲ್ಲೇ ಕೊಡ್ಲಿಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಉತ್ತಮ ಸೌಕರ್ಯ ಹೊಂದಿರುವ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಕೊಡ್ಲಿಪೇಟೆಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಜಾಗವನ್ನು ಗುರುತಿಸಲಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭವಾದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಆಲೂರು ಸಿದ್ದಾಪುರಕ್ಕೆ ಬೇಕಾಗಿದೆ ಬಸ್ ನಿಲ್ದಾಣ
ಶನಿವಾರಸಂತೆ ಹೋಬಳಿಗೆ ಹೊಂದಿಕೊಂಡಂತಿರುವ ಕೊಡಗಿನ ಗಡಿ ಭಾಗವಾದ ಆಲೂರು ಸಿದ್ದಾಪುರ ದಿನೇದಿನೇ ಪಟ್ಟಣದಂತೆ ಬೆಳವಣಿಗೆ ಹೊಂದುತ್ತಿದ್ದು ಸುತ್ತಮುತ್ತಲಿನ ರೈತರು ತಮ್ಮ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುತ್ತಿದ್ದಾರೆ. ಪ್ರೌಢಶಾಲೆ ಪದವಿಪೂರ್ವ ಕಾಲೇಜು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯ ಕೈಗಾರಿಕಾ ತರಬೇತಿ ಕೇಂದ್ರ ಸಂಸ್ಥೆಗಳು ಇವೆ. ನಿತ್ಯವೂ ಅನೇಕ ಖಾಸಗಿ ಮತ್ತು ಸಾರಿಗೆ ಬಸ್‌ಗಳು ಶನಿವಾರಸಂತೆ ಮತ್ತು ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಈ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ನಿಲ್ದಾಣದ ವ್ಯವಸ್ಥೆ ಆಗಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.