ADVERTISEMENT

ದುಬಾರೆಯಿಂದ ಆನೆಗಳ ಸ್ಥಳಾಂತರ ಆಗಿಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ

ಗೋಣಿಕೊಪ್ಪಲು ಸಮೀಪದ ಮತ್ತಿಗೋಡು ಸಾಕಾನೆ ಶಿಬಿರ ಸ್ಥಳಾಂತರ ವಿಚಾರ: ಹೈಕೋರ್ಟ್ ಆದೇಶದ ಬಳಿಕ ತೀರ್ಮಾನ– ಅರಣ್ಯಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 12:06 IST
Last Updated 3 ಡಿಸೆಂಬರ್ 2019, 12:06 IST

ಮಡಿಕೇರಿ: ‘ಕೊಡಗಿನ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ಒಂದೇ ಒಂದು ಸಾಕಾನೆಯೂ ಸ್ಥಳಾಂತರವಾಗಿಲ್ಲ. 30 ಆನೆಗಳೂ ಶಿಬಿರದಲ್ಲೇ ಉಳಿದಿವೆ’ ಎಂದು ಆರ್‌ಎಫ್‌ಒ ಅನನ್ಯಕುಮಾರ್‌ ಮಾಹಿತಿ ನೀಡಿದರು.

‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಶಿಬಿರಗಳ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ಒತ್ತಡ ನಿವಾರಣೆಗೆ ಹೊಸ ಶಿಬಿರ ತೆರೆಯಲು ಸಮಿತಿ ಶಿಫಾರಸು ಮಾಡಿದೆ. ಹೊಸ ಶಿಬಿರ ಆರಂಭಿಸಿ ಅಲ್ಲಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅದಕ್ಕೆ ಸಾಕಷ್ಟು ಸಮಯಾವಕಾಶ ಅಗತ್ಯವಿದೆ. ಸದ್ಯಕ್ಕೆ ಯಾವುದೇ ಹೊಸ ಕ್ಯಾಪ್‌ ಆರಂಭಿಸಿಲ್ಲ. ಸಾಕಾನೆಗಳೂ ಸ್ಥಳಾಂತರಗೊಂಡಿಲ್ಲ. ಹದಿನೈದು ಆನೆಗಳ ಸ್ಥಳಾಂತರವಾಗಿದೆ ಎಂಬುದು ತಪ್ಪು ಮಾಹಿತಿ’ ಎಂದು ಅನನ್ಯಕುಮಾರ್‌ ವಿವರಣೆ ನೀಡಿದರು.

ಗೋಣಿಕೊಪ್ಪಲು ವರದಿ:

ADVERTISEMENT

‘ಕಣ್ಣೂರು – ಮೈಸೂರು ಅಂತರರಾಜ್ಯ ಹೆದ್ದಾರಿಯಲ್ಲಿರುವ ಆನೆಚೌಕೂರು ಬಳಿಯ ಮತ್ತಿಗೋಡು ಸಾಕಾನೆ ಶಿಬಿರವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ವಿವಾದ ಹೈಕೋರ್ಟ್‌ನಲ್ಲಿದ್ದು, ಕೋರ್ಟ್ ಆದೇಶದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ. ಆದೇಶಕ್ಕೆ ಕಾಯುತ್ತಿದ್ದೇವೆ’ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್ ಸ್ಪಷ್ಟಪಡಿಸಿದರು.

’ರಾಜ್ಯ ಸರ್ಕಾರವೂ ಸಮಿತಿಯೊಂದನ್ನು ರಚಿಸಿ ಶಿಬಿರಗಳ ಮಾಹಿತಿಯನ್ನು ತರಿಸಿಕೊಂಡು ಹೈಕೋರ್ಟ್‌ಗೆ ಸಲ್ಲಿಸಿದೆ. ಇದೀಗ ನ್ಯಾಯಾಲಯದಲ್ಲಿ ಈ ಬಗ್ಗೆ ವಾದ ನಡೆಯುತ್ತಿದೆ. ಹೈಕೋರ್ಟ್ ನೀಡಿದ ತೀರ್ಪಿನಂತೆ ಮುಂದೆ ಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲೇ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಶಿಬಿರದಲ್ಲಿನ ಆನೆಗಳ ಆರೈಕೆ ಎಂದಿನಂತೆ ಮುಂದುವರಿಯಲಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಅಂತರ ರಾಜ್ಯ ಹೆದ್ದಾರಿಯ ಬಳಿ ಸಾಕಾನೆ ಶಿಬಿರ ಇರುವುದರಿಂದ ಆನೆಗಳ ಓಡಾಟಕ್ಕೆ ರಕ್ಷಣೆಯಿಲ್ಲದಂತಾಗಿದೆ. ಹೆದ್ದಾರಿ ಬಳಿಯಿಂದ ಶಿಬಿರವನ್ನು ಸ್ಥಳಾಂತರಿಸಬೇಕು ಎಂದು ಸಮಿತಿಯವರು ವರದಿ ನೀಡಿದ್ದಾರೆ. ಇದರ ಜತೆಗೆ ಕೆಲವು ಸಾರ್ವಜನಿಕ ಸಂಘ-ಸಂಸ್ಥೆಗಳು ಕೂಡ ರಾಜ್ಯದ ಕೆಲವು ಆನೆ ಶಿಬಿರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಮತ್ತಿಗೋಡು ಶಿಬಿರದಲ್ಲಿನ ಆನೆಗಳು ಕುಡಿಯಲು ಮತ್ತು ಮೈತೊಳೆಯಲು ಕೆರೆ ನೀರನ್ನು ಅವಲಂಭಿಸಬೇಕಾಗಿದೆ. ಇದರಿಂದ ಆನೆಗಳಿಗೆ ರೋಗರುಜಿನ ಬರುವ ಸಾಧ್ಯತೆಯಿದೆ. ಮತ್ತಿಗೋಡಿನಂಥ ಶಿಬಿರಗಳನ್ನು ನದಿ ಹರಿಯುವ ಕಡೆಗೆ ಸ್ಥಳಾಂತರಿಸಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಮತ್ತಿಗೋಡು ಸಾಕಾನೆ ಶಿಬಿರ ಆರ್‌ಎಫ್‌ಒ ಶಿವಾನಂದ್ ಲಿಂಗಾಣಿ, ಮತ್ತಿಗೋಡು ಶಿಬಿರದಲ್ಲಿ ಯಾವುದೇ ನದಿಯಿಲ್ಲದಿರುವುದರಿಂದ ಸ್ಥಳಾಂತರದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅದರ ಬಗ್ಗೆ ತಮಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.