ADVERTISEMENT

ರ‍್ಯಾಪ್ಟ್‌ ಮಾಲೀಕರು ಫಿಟ್‍ನೆಸ್ ಪ್ರಮಾಣಪತ್ರ ಪಡೆಯಲು ಸೂಚನೆ

ದುಬಾರೆ, ಬರಪೊಳೆಯಲ್ಲಿ ರಿವರ್ ರ‍್ಯಾಪ್ಟಿಂಗ್‌ ಪರವಾನಗಿ ನವೀಕರಣ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 4:12 IST
Last Updated 14 ಜೂನ್ 2025, 4:12 IST
ಕುಶಾಲನಗರ ಸಮೀಪದ ಹಾರಂಗಿ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಮಂತರ್ ಗೌಡ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ರಿವರ್ ರ‍್ಯಾಪ್ಟಿಂಗ್‌ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು 
ಕುಶಾಲನಗರ ಸಮೀಪದ ಹಾರಂಗಿ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಮಂತರ್ ಗೌಡ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ರಿವರ್ ರ‍್ಯಾಪ್ಟಿಂಗ್‌ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು    

ಕುಶಾಲನಗರ: ಜಿಲ್ಲೆಯ ದುಬಾರೆ ಹಾಗೂ ಬರಪೊಳೆಯಲ್ಲಿ ರಿವರ್ ರ‍್ಯಾಪ್ಟಿಂಗ್‌ (ಜಲಕ್ರೀಡೆ) ನಡೆಸುವ ರ‍್ಯಾಪ್ಟ್‌ ಮಾಲೀಕರು ಕಡ್ಡಾಯವಾಗಿ ಪರವಾನಗಿ ನವೀಕರಣ ಹಾಗೂ ಫಿಟ್‍ನೆಸ್ ಪ್ರಮಾಣಪತ್ರ ಪಡೆದು ಜಲಕ್ರೀಡೆ ನಡೆಸಲು ರಿವರ್ ರ‍್ಯಾಪ್ಟಿಂಗ್‌ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಿರ್ಧರಿಸಿತು.

ಹಾರಂಗಿ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಮಂತರ್ ಗೌಡ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ‍್ಯಾಪ್ಟಿಂಗ್‌ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ರಿವರ್ ರ‍್ಯಾಪ್ಟಿಂಗ್‌ ಸ್ಥಳದ ಟಿಕೆಟ್ ಕೌಂಟರ್ ಪ್ರದೇಶದಲ್ಲಿ ಸೆಲ್ಟರ್ ಅಳವಡಿಕೆ, ಪ್ರವಾಸಿಗರ ಸುರಕ್ಷತೆಗೆ ಸೋಪಾನ್ ಕಟ್ಟೆ ರೈಲಿಂಗ್ಸ್ ಅಳವಡಿಕೆ, ಗೈಡ್‍ಗಳ ಬಟ್ಟೆ ಬದಲಿಸುವ ಕೊಠಡಿ, ಬೆಂಚ್‍ಗಳ ಅಳವಡಿಕೆ, ಕುಡಿಯುವ ನೀರು, ಮಾಹಿತಿ ಫಲಕ, ಶೌಚಾಲಯ ನಿರ್ಮಾಣ ಜೊತೆಗೆ ಸಿಸಿಟಿವಿ ಅಳವಡಿಕೆಗೆ ಸಭೆಯಲ್ಲಿ ಅನುಮೋದಿಸಲಾಯಿತು.

ADVERTISEMENT

ಸಭೆಯಲ್ಲಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ‘ರಿವರ್ ರ‍್ಯಾಪ್ಟಿಂಗ್‌ ಸಂದರ್ಭದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಮತ್ತು ಜೀವರಕ್ಷಣೆ ಅತೀ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ರಿವರ್ ರ‍್ಯಾಪ್ಟ್‌ ಫಿಟ್‍ನೆಸ್ ಪ್ರಮಾಣಪತ್ರ ಕಡ್ಡಾಯವಾಗಿ ಪಡೆಯಬೇಕು. ಜೊತೆಗೆ ಪ್ರತೀ ವರ್ಷ ನವೀಕರಣ ಮಾಡಿಕೊಳ್ಳಬೇಕು. ನಂತರ ರಿವರ್ ರ‍್ಯಾಪ್ಟಿಂಗ್‌ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

‘ಮುಂಗಾರು ಸಂದರ್ಭದಲ್ಲಿ ಜಲಪಾತ ವೀಕ್ಷಣೆ ಹಾಗೂ ಜಲಸಾಹಸ ಕ್ರೀಡೆ ಒಂದು ಆಕರ್ಷಣೀಯ ಹಾಗೂ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಿವರ್ ರ‍್ಯಾಪ್ಟಿಂಗ್‌ ಒಂದು ಭಾಗವಾಗಿದ್ದು, ಆ ನಿಟ್ಟಿನಲ್ಲಿ ರಿವರ್ ರ‍್ಯಾಪ್ಟಿಂಗ್‌ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಜಲಕ್ರೀಡೆ ಸಂದರ್ಭದಲ್ಲಿ ಜೀವರಕ್ಷಕ ಜಾಕೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಸಮವಸ್ತ್ರವನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕರು ಸೂಚಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ರಿವರ್ ರ‍್ಯಾಪ್ಟಿಂಗ್‌ ಸಂದರ್ಭದಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಕೊಡಗು ಜಿಲ್ಲೆಯ ಇಡೀ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು. ರಿವರ್ ರ‍್ಯಾಪ್ಟಿಂಗ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಜಲಸಾಹಸ ಕ್ರೀಡೆ ನಡೆಸುವ ಗೈಡ್‍ಗಳು ಸೂಕ್ತ ತರಬೇತಿ ಪಡೆದಿರಬೇಕು. ಹಾಗೆಯೇ ವೃತ್ತಿ ಕೌಶಲ ಹೊಂದಿರಬೇಕು. ಜೊತೆಗೆ ಜೇತ್ನ ಸಂಸ್ಥೆ ಈ ಬಗ್ಗೆ ಧೃಡೀಕರಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಕುಮಾರಳ್ಳಿ(ಬೀದಳ್ಳಿ) ರಿವರ್ ರ‍್ಯಾಪ್ಟಿಂಗ್‌ ನಡೆಸುವ ಸಂಬಂಧ ಈಗಾಗಲೇ ಅನುಮತಿ ನೀಡಲಾಗಿದೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬರದಿರುವ ಹಿನ್ನೆಲೆ ಸ್ಥಳ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು’ ಎಂದು  ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಮಾತನಾಡಿ, ದುಬಾರೆಯಲ್ಲಿ ಒಟ್ಟು 75 ರಿವರ್ ರ‍್ಯಾಪ್ಟಿಂಗ್‌, ಬರಪೊಳೆಯಲ್ಲಿ 24 ರ‍್ಯಾಪ್ಟಿಂಗ್‌ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ಜಲ ಸಾಹಸ ಕ್ರೀಡೆಯಲ್ಲಿ ಒಂದಾದ ಕಯಾಕಿಂಗ್ ನಡೆಸಲು ಅವಕಾಶವಿದೆ. ಈ ಸಂಬಂಧ ಜಿಲ್ಲೆಯಲ್ಲಿ 11 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅನಿತಾ ಭಾಸ್ಕರ್ ಅವರು ಮಾಹಿತಿ ನೀಡಿದರು.

ಹೇಮಾವತಿ ನದಿ ಪಾತ್ರ ಕೊಡ್ಲಿಪೇಟೆ ದೊಡ್ಡಕುಂದ, ಹಟ್ಟಿಹೊಳೆ ಬಳಿಯ ದೇವಸ್ತೂರು ನದಿ, ಕಾವೇರಿ ನದಿ ಪಾತ್ರದ ಐವತ್ತೊಕ್ಲು, ಹೊದ್ದೂರು, ಹಾರಂಗಿ ಹಿನ್ನೀರು ಪ್ರದೇಶದ ಹೆರೂರು, ನಾಕೂರು ಶಿರಂಗಾಲ, ಬೈರಂಪಾಡ, ಚಿಕ್ಕಬೆಟ್ಟಗೇರಿ ಈ ಪ್ರದೇಶಗಳಲ್ಲಿ ಕಯಾಕಿಂಗ್‌ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ಸಂಬಂಧ ಕಾರ್ಯಸಾಧ್ಯತಾ ವರದಿ ನೋಡಿಕೊಂಡು ಮುಂದಿನ ಕ್ರಮವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಉಪ ಅರಣ್ಯ ಸಂರಕ್ಷಾಣಧಿಕಾರಿ ಅಭಿಷೇಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಅರಣ್ಯ ಇಲಾಖೆಯ ರತನ್, ಅಗ್ನಿಶಾಮಕ ಅಧಿಕಾರಿ ರಾಜೇಶ್, ಜೇತ್ನಾ ಸಂಸ್ಥೆಯ ಕೀರ್ತಿ ಪಯಾಸ್, ದುಬಾರೆ ರಿವರ್ ರ‍್ಯಾಪ್ಟಿಂಗ್‌ನ ವಿಜು ಚಂಗಪ್ಪ, ವಸಂತ್ ಪಿ.ಸಿ, ಬರಪೊಳೆಯ ರತನ್ ಸಿ.ಎಸ್, ನಿತಿನ್, ಕುಮಾರಳ್ಳಿಯ ಪ್ರದೀಪ್, ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ  ಎಇಇ ಸತೀಶ್, ತಹಶೀಲ್ದಾರ್ ಕಿರಣ್ ಗೌರಯ್ಯ, ಐಟಿಡಿಪಿ ಅಧಿಕಾರಿ ಎಸ್.ಹೊನ್ನೇಗೌಡ, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ನಂಜರಾಯಪಟ್ಟಣ ಪಿಡಿಒ ರಾಜಶೇಖರ್ ಪಾಲ್ಗೊಂಡಿದ್ದರು.

ರ‍್ಯಾಪ್ಟಿಂಗ್‌ ಫಿಟ್‍ನೆಸ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯಬೇಕು. ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಯಬೇಕು
ಡಾ.ಮಂತರ್ ಗೌಡ ಶಾಸಕ
ಜೇತ್ನಾದಿಂದ ಕೌಶಲ ತರಬೇತಿಗೆ ಸೂಚನೆ
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡ ಜೇನು ಕುರುಬ ಜನಾಂಗದ ಯುವಕರಿಗೆ ರ‍್ಯಾಪ್ಟಿಂಗ್‌ ಸಲಕರಣೆಗಳನ್ನು ವಿತರಿಸಲು ತಲಾ ₹2 ಲಕ್ಷ ದಂತೆ 9 ಜನ ಫಲಾನುಭವಿಗಳಿಗೆ ₹18 ಲಕ್ಷ ಬಿಡುಗಡೆಯಾಗಿದ್ದು ಈ ಯುವಕರು ಈಗಾಗಲೇ ತಲಾ ಒಂದು ರ‍್ಯಾಪ್ಟ್‌ ಖರೀದಿ ಮಾಡಿದ್ದಾರೆ. ಈ ಸಂಬಂಧ ದುಬಾರೆಯಲ್ಲಿ ರ‍್ಯಾಪ್ಟಿಂಗ್‌ ನಡೆಸಲು ಪರವಾನಗಿ ನೀಡುವಂತೆ ಕೋರಿದ್ದು ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹೊಸದಾಗಿ ರಿವರ್ ರ‍್ಯಾಪ್ಟಿಂಗ್‌ ನಡೆಸಲು ಅನುಮತಿಗಾಗಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವ ಹಿನ್ನೆಲೆ ಈಗಾಗಲೇ ರಿವರ್ ರ‍್ಯಾಪ್ಟಿಂಗ್‌ ನಡೆಸುತ್ತಿರುವವರು ಹೊಸದಾಗಿ ರಿವರ್ ರ‍್ಯಾಪ್ಟಿಂಗ್‌ಗೆ ಅನುಮತಿ ನೀಡಬಾರದು ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಸದ್ಯ ತೀರ್ಪು ಪ್ರಕಟವಾದ ನಂತರ ಮುಂದಿನ ಕ್ರಮ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಿವರ್ ರ‍್ಯಾಪ್ಟಿಂಗ್‌ ನಡೆಸುವವರು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (ಜೇತ್ನಾ) ಯಿಂದ ಕೌಶಲ ತರಬೇತಿ ಪಡೆಯಲು ಸಲಹೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.