ಕುಶಾಲನಗರ: ಅಖಿಲ ಭಾರತ ಸಾಧು ಸಂತರ ತಂಡದಿಂದ ನದಿ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಂಬಂಧ ಒಂದು ತಿಂಗಳು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಶನಿವಾರ ಜಿಲ್ಲೆಗೆ ಬಂದ ಸಂದರ್ಭ ಇಲ್ಲಿನ ಟೋಲ್‌ಗೇಟ್ ಬಳಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಸಾಂಪ್ರದಾಯಿಕ ಸ್ವಾಗತ ಕೋರಿದರು.
ತಲಕಾವೇರಿಯಿಂದ ಪೂಂಪ್‌ಹಾರ್‌ವರೆಗೆ ಸಾಗಲಿರುವ ಯಾತ್ರೆಗೆ ನ. 20ರಂದು ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ದೊರೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪವಿತ್ರ ತೀರ್ಥವನ್ನು ಕಲಶಗಳಲ್ಲಿ ಸಂಗ್ರಹಿಸಿ ಒಯ್ಯಲಾಗುವುದು. 14ನೇ ವರ್ಷದ ಯಾತ್ರೆಗೆ ಅರಮೇರಿ ಮಠಾಧೀಶರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಅಖಿಲ ಭಾರತ ಸನ್ಯಾಸಿಗಳ ಸಂಘದ ಸಂಸ್ಥಾಪಕ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಾಧು-ಸಂತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಾವೇರಿ ಮಾತೆಯ ರಥದೊಂದಿಗೆ ನವೆಂಬರ್ 13ರ ತನಕ ಕಾವೇರಿ ನದಿ ತಟದ ಪ್ರದೇಶಗಳಲ್ಲಿ ತಂಡ ಸಂಚರಿಸಲಿದೆ. ತಮಿಳುನಾಡಿನ ಕಾವೇರಿ ಹಾಗೂ ಬಂಗಾಳ ಕೊಲ್ಲಿ ಸಮುದ್ರಸಂಗಮದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪವಿತ್ರ ತೀರ್ಥವನ್ನು ವಿಸರ್ಜನೆ ಮಾಡುವುದರೊಂದಿಗೆ ಯಾತ್ರೆ ಅಂತ್ಯಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಯಾತ್ರಾ ಅವಧಿಯಲ್ಲಿ ನದಿಯ ತಟಗಳಲ್ಲಿ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು ನಡೆಯುವುದರೊಂದಿಗೆ ನದಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ರಮಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.