ADVERTISEMENT

ತರಕಾರಿ ಅಂಗಡಿ ಸ್ಥಳಾಂತರಕ್ಕೆ ವಿರೋಧ

ಗೋಣಿಕೊಪ್ಪಲು ಪಟ್ಟಣದಲ್ಲಿ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 3:50 IST
Last Updated 8 ಮೇ 2021, 3:50 IST
ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವಾಹನಗಳು
ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವಾಹನಗಳು   

ಗೋಣಿಕೊಪ್ಪಲು: ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಮುಂಜಾನೆಯಿಂದಲೇ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ಜನ ಬಂದರು.

ಬೆಳಿಗ್ಗೆ 6 ಗಂಟೆಯಿಂದಲೇ ಬೈಕ್, ಕಾರು ಮೊದಲಾದ ವಾಹನಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಲುಗಟ್ಟಿ ನಿಂತವು. ಬೆಳಿಗ್ಗೆ 9 ಗಂಟೆ ವೇಳೆಗೆ ಪಟ್ಟಣದ ಯಾವ ರಸ್ತೆ ನೋಡಿದರೂ ವಾಹನಗಳೇ ತುಂಬಿ ತುಳಿಕಿದವು.

ಮುಖ್ಯ ರಸ್ತೆ, ಬೈಪಾಸ್ ರಸ್ತೆಯಲ್ಲಿ ನಡೆದಾಡುವುದಕ್ಕೆ ಜಾಗವಿರಲಿಲ್ಲ. ಬೈಪಾಸ್ ರಸ್ತೆಯ ಪೊನ್ನಂಪೇಟೆ ತಿರುವು, ಪಾಲಿಬೆಟ್ಟ ರಸ್ತೆ ತಿರುವಿನಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದವು.

ADVERTISEMENT

ಪೊನ್ನಂಪೇಟೆ ತಿರುವಿನಿಂದ ಮೈಸೂರು ರಸ್ತೆ ಸೀಗೆತೋಡುವರೆಗೂ 2 ಕಿಮೀ ದೂರ ವಾಹನಗಳು ನಿಂತಿದ್ದವು. ಈ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.

ಪಟ್ಟಣದ ಬಸ್ ನಿಲ್ದಾಣದ ಬಳಿ ಇದ್ದ ತರಕಾರಿ ಮಾರುಕಟ್ಟೆಯನ್ನು ಒಂದು ಕಿ.ಮೀ ದೂರದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ವಾಹನ ಇಲ್ಲದವರು ಹಾಗೂ ಕೂಲಿ ಕಾರ್ಮಿಕರು ತೀವ್ರ ಬವಣೆ ಅನುಭವಿಸಿದರು.

‘ನೂರು ರೂಪಾಯಿ ತರಕಾರಿ ತರಲು ಅಷ್ಟೇ ಹಣವನ್ನು ಆಟೊ ಬಾಡಿಗೆ ಕೊಡಬೇಕಾಗಿದೆ. ತರಕಾರಿ ಅಂಗಡಿಗಳನ್ನು ಎಪಿಎಂಸಿಗೆ ವರ್ಗಾಯಿಸಿರುವುದು ತೀರ ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮವಾಗಿದೆ’ ಎಂದು ಪಟ್ಟಣದ ನಿವಾಸಿ ರಫೀಕ್ ತೂಚಮಕೇರಿ ತೀರ ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿ ಆವರಣಕ್ಕೆ ತರಕಾರಿ ಕೊಂಡೊಯ್ಯಲು ವಾಹನಕ್ಕೆ ₹500 ಬಾಡಿಗೆ ಕೊಡಬೇಕು ಮತ್ತು ವಾಪಸ್‌ ತರಲು ಅಷ್ಟೇ ಬಾಡಿಗೆ ನೀಡಬೇಕಾಗಿದೆ. ದೂರವಿರುವುದರಿಂದ ಜನರೂ ಬರುತ್ತಿಲ್ಲ, ವ್ಯಾಪಾರವೂ ಆಗುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿಅಸ್ಲಾಂ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.