ADVERTISEMENT

ಉದ್ಯೋಗ ಖಾತರಿ ಯೋಜನೆ ದುರ್ಬಲಗೊಳಿಸಿದ ಕೇಂದ್ರ– ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:06 IST
Last Updated 21 ಡಿಸೆಂಬರ್ 2025, 6:06 IST

ಸೋಮವಾರಪೇಟೆ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ(ಎಂಜಿ–ನರೇಗಾ) ಹೆಸರು ಬದಲಾಯಿಸಿ, ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಮೂಲಕ ಕೇಂದ್ರ ಸರ್ಕಾರವು ಗ್ರಾಮೀಣ ರೈತರ, ಬಡವರ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಂಡಿರುವುದು ಸಂವಿಧಾನ ವಿರೋಧಿ ಕೃತ್ಯ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೆ.ಪ್ರಕಾಶ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಹಾತ್ಮ ಗಾಂಧಿ ಹೆಸರನ್ನು ತೆಗೆದು ವಿಬಿ–ಜಿ ರಾಮ್ ಜಿ ಹೆಸರಿಡಲಾಗಿದೆ. ಈ ಮೂಲಕ ಸ್ವಾತಂತ್ರ್ಯ ಸೇನಾನಿ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಲಾಗಿದೆ. ಕೋಮುವಾದಿ ಬಿಜೆಪಿಯವರಿಗೆ ಗಾಂಧೀಜಿಯವರ ಸರ್ವಧರ್ಮಗಳ ಸಾಮರಸ್ಯದ ತತ್ವಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಈ ಕಾರಣದಿಂದಲೇ ಕೀಳು ರಾಜಕೀಯಕ್ಕೆ ಮುಂದಾಗಿದೆ’ ಎಂದು ದೂರಿದ್ದಾರೆ.

ADVERTISEMENT

‘2005ರಲ್ಲಿ ಜಾರಿಗೆ ಬಂದಿದ್ದ ಈ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಮುಖ್ಯವಾಗಿ ಬಡವರು ಮತ್ತು ಸಣ್ಣ ರೈತರಿಗೆ ಉದ್ಯೋಗ, ಉಪ ಜೀವನಕ್ಕೆ ಅನುಕೂಲವಾಗಿತ್ತು. ಬರಗಾಲದಂತಹ ಸಂದರ್ಭದಲ್ಲಿ ಮಧ್ಯಮ ವರ್ಗದ ರೈತರು ಕೂಡ ಯೋಜನೆ ಫಲಾನುಭವಿಗಳಾಗಿ ಅನುಕೂಲ ಪಡೆಯುತ್ತಿದ್ದರು. ಇನ್ನು ಮುಂದೆ ಕೇಂದ್ರ ಸರ್ಕಾರದ ಮುಲಾಜಿಗೊಳಪಡುವ ರಾಜ್ಯಗಳಿಗೆ ಮಾತ್ರ ಯೋಜನೆ ದೊರೆಯುತ್ತದೆ’ ಎಂದರು.

‘ಈ ಹಿಂದೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಕೂಲಿ ಕೆಲಸ ಕೊಡದಿದ್ದರೆ, ಕೂಲಿಯ ಅರ್ಧದಷ್ಟು ನಿರುದ್ಯೋಗ ಭತ್ಯೆ ಕೊಡಬೇಕಾಗಿತ್ತು. ತಿದ್ದುಪಡಿ ಕಾಯ್ದೆಯಲ್ಲಿ ಈ ಅವಕಾಶವನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನಗಳಲ್ಲಿ ಮಾತ್ರ ಕೆಲಸ ಮಾಡಬೇಕಾಗಿದೆ. ಇದು ದೇಶದ ಶ್ರಮ ಜೀವಿಗಳಿಗೆ ಮಾಡಿದ ಅನ್ಯಾಯ’ ಎಂದು ದೂರಿದ್ದಾರೆ.

‘ತಿದ್ದುಪಡಿಯು ಸಂವಿಧಾನದ 73ನೇ ಪರಿಚ್ಛೇದಕ್ಕೆ ವಿರುದ್ಧವಾಗಿದೆ. ಶೇ 90ರಷ್ಟು ಹಣ ನೀಡಬೇಕಿದ್ದ ಕೇಂದ್ರವು ಈಗ ಶೇ 70ಕ್ಕೆ ಸೀಮಿತ ಮಾಡಿಕೊಂಡಿದೆ. ರಾಜ್ಯಕ್ಕೆ ಹೆಚ್ಚುವರಿಯಾಗಿ ಶೇ 30ರಷ್ಟು ಹೊರೆಯಾಗಿದೆ. ತೆರಿಗೆಯಲ್ಲಿ ಅನ್ಯಾಯ ಮಾಡುವ ಕೇಂದ್ರವು ಅನುದಾನದಲ್ಲೂ ಅನ್ಯಾಯ ಮಾಡಿದೆ. ಸರ್ವಾಧಿಕಾರ ಆಳ್ವಿಕೆ ಹೇರುವುದರೊಂದಿಗೆ ಒಕ್ಕೂಟದ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.