ADVERTISEMENT

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೋಷಕರ ಜವಬ್ದಾರಿ ಮುಖ್ಯ : ಶಶಿಧರ್

ಕೂಡಿಗೆ : ಪೋಷಕರ, ಉಪನ್ಯಾಸಕರ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:17 IST
Last Updated 15 ನವೆಂಬರ್ 2025, 5:17 IST
ಕುಶಾಲನಗರ ಸಮೀಪದ ಕೂಡಿಗೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ-ಉಪನ್ಯಾಸಕರ ಮಹಾಸಭೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಮಕ್ಕಳ ಪೋಷಕರನ್ನು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು
ಕುಶಾಲನಗರ ಸಮೀಪದ ಕೂಡಿಗೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ-ಉಪನ್ಯಾಸಕರ ಮಹಾಸಭೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಮಕ್ಕಳ ಪೋಷಕರನ್ನು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು   

ಕುಶಾಲನಗರ: ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳೊಂದಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ, ನವೀನ ವಿಧಾನಗಳನ್ನು ಪರಿಚಯಿಸಿ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ ಮತ್ತು ಉಪನ್ಯಾಸಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉಪನ್ಯಾಸಕರೊಂದಿಗೆ ಪೋಷಕರ ಜವಾಬ್ದಾರಿ ತುಂಬ ಮಹತ್ವದಾಗಿದೆ. ಮಕ್ಕಳು ಮೊಬೈಲ್ ಗೀಳು ಬೆಳೆಸಿಕೊಳ್ಳದಂತೆ ಎಚ್ಚರಿಕೆ ವಹಿಸಿ, ಮೊಬೈಲ್ ವ್ಯಸನದಿಂದ ಮುಕ್ತಗೊಳಿಸಲು ಮಕ್ಕಳಿಗೆ ತಿಳಿವಳಿಕೆ ಹೇಳಬೇಕು. ಸೃಜನಶೀಲ ಚಟುವಟಿಕೆಗಳಿಗೆ ಪ್ರೇರಣೆ ನೀಡಬೇಕು. ಅವರಲ್ಲಿರುವ ಸೂಪ್ತ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡಬೇಕು ಎಂದರು.

ADVERTISEMENT

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ‌ ಎಂ.ಎಲ್.ಚಿದಾನಂದ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ಓದಿದ ಬಹುತೇಕ ಮಂದಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿದ್ದಾರೆ. ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಪ್ರತಿಭಾವಂತ ಶಿಕ್ಷಕರು, ಉಪನ್ಯಾಸಕರು ಇದ್ದಾರೆ. ಜೊತೆಗೆ ಸರ್ಕಾರ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸುತ್ತಿದೆ. ಇದು ನಿಮ್ಮ ಶಾಲೆ, ನಮ್ಮ ಜವಾಬ್ದಾರಿ ಏನು ಎಂಬುದನ್ನು ಪೋಷಕರು ಮನಗಾಣಬೇಕು. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ತರಬೇಕು. ಅರಿವು‌ ಮೂಡಿಸಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಹಂಡ್ರಾಂಗಿ ನಾಗರಾಜು ಮಾತನಾಡಿ, ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಪಾತ್ರ ಕುಟುಂಬ ಹಾಗೂ ಪಾಲಕರದ್ದು ಎಂಬುದನ್ನು ಮರೆಯಬಾರದು. ಮಗು ಅತಿ ಹೆಚ್ಚಿನ ಸಮಯವನ್ನು ಪಾಲಕರೊಂದಿಗೆ ಕಳೆಯುವುದರಿಂದ ಮಗುವಿನ ಬಗ್ಗೆ ಹೆಚ್ಚಿನ ವಿಷಯಗಳನ್ನು ಅವರಿಂದ ಶಿಕ್ಷಕರು ತಿಳಿಯಲು ಅಂತೆಯೇ, ಶೈಕ್ಷಣಿಕ ವಿಷಯಗಳು ಮತ್ತು ತಮ್ಮ ಮಗುವಿನ ತರಗತಿಯಲ್ಲಿನ ವರ್ತನೆಯನ್ನು ತಿಳಿಯಲು ಪೋಷಕರಿಗೆ ಇದೊಂದು ಸದಾವಕಾಶ ಎಂದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಪೋಷಕರಾಗಿ ನಾವು ಮನೆಯಲ್ಲಿ ಹೇಗೆ ನಡೆದುಕೊಳ್ಳುತ್ತೇವೆ ಮತ್ತು ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದ ಏನು ಕಲಿಸುತ್ತೇವೆ, ಅವರು ಅದನ್ನೇ ನೋಡಿ ತಿಳಿದುಕೊಂಡು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹೀಗಾಗಿ ಉತ್ತಮ ಮೌಲ್ಯಗಳನ್ನು ಚಿಕ್ಕ ವಯಸ್ಸಿನಿಂದ ಹೇಳಿಕೊಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಈರಪ್ಪ ಹಾಗೂ ಪೋಷಕರ ಪಾಲ್ಗೊಂಡಿದ್ದರು.

ಉಪನ್ಯಾಸಕ ರಮೇಶ್ ಸಂವಿಧಾನ ಪೀಠಿಕೆ ವಾಚಿಸಿದರು. ಹನುಮರಾಜ್ ವಂದಿಸಿದರು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಉತ್ತೀರ್ಣರಾದ ಮಕ್ಕಳ ಪೋಷಕರನ್ನು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.