
ಶನಿವಾರಸಂತೆ: ‘ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ರಾಷ್ಟ್ರನಾಯಕರು, ಮಹಾನ್ ವ್ಯಕ್ತಿಗಳ ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆಯಾಗಬೇಕು’ ಎಂದು ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಹೇಳಿದರು.
ಸಮೀಪದ ಬೆಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
‘ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳು ಹೊಣೆಗಾರಿಕೆ ಬಹುಮುಖ್ಯವಾದರೂ ಪೋಷಕರು ಜವಾಬ್ದಾರಿಯೂ ಅಷ್ಟೇ ಸಮನಾಗಿದೆ. ವಿದ್ಯೆ ಮನುಷ್ಯನ ಬಾಳು ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕಮಲಮ್ಮ ಮಾತನಾಡಿ, ‘ಗ್ರಾಮಸ್ಥರು ಹಾಗೂ ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದರು.
ಚಿಕ್ಕ ಅಳುವಾರ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಪ್ರೊ. ಧರ್ಮಪ್ಪ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ. ಪೋಷಕರು ಮಕ್ಕಳ ಪ್ರೌಢಶಿಕ್ಷಣ ಮುಗಿದ ನಂತರ ಪಿಯುಸಿ ವ್ಯಾಸಂಗಕ್ಕೆ ಪಟ್ಟಣ ಹಾಗೂ ನಗರ ಪ್ರದೇಶದ ಉತ್ತಮ ಕಾಲೇಜುಗಳಿಗೆ ಸೇರಿಸಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಚಿಂತನೆ ಹರಿಸಬೇಕು’ ಎಂದರು.
ಸಂಪನ್ಮೂಲ ವ್ಯಕ್ತಿ ಜಯಕುಮಾರ್ ಮಾತನಾಡಿ, ‘ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಹಾಗೂ ಹವ್ಯಾಸಗಳನ್ನು ಕಲಿಸುವತ್ತ ಗಮನ ಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಿದ್ದು, ಉತ್ತಮ ಪರಿಸರದಲ್ಲಿ ಮಕ್ಕಳು ಬೆಳೆಯುವ ವಾತಾವರಣ ನಿರ್ಮಿಸಬೇಕು’ ಎಂದರು.
ಕಾಫಿ ಬೆಳೆಗಾರ ಯತೀಶ್ ಮಾತನಾಡಿದರು. ಶಿಕ್ಷಕಿ ಎಚ್.ಪಿ.ತೇಜಾವತಿ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಎಂ.ಸಿ.ಧರ್ಮರಾಜ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸೌಮ್ಯ, ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಘಟಕದ ನಿರ್ದೇಶಕ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಕವಿತಾ, ಕೊಡ್ಲಿಪೇಟೆ ಶಿಕ್ಷಕ ಕೆ.ಎನ್.ಕಿರಣ್ ಕುಮಾರ್, ಮುಳ್ಳುರು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸತೀಶ್,ಸಹ ಶಿಕ್ಷಕ ಜಾನ್, ಸಿ.ಆರ್.ಪಿ. ಮುರುಳೀಧರ್, ದಾನಿಗಳಾದ ಎನ್.ಎನ್.ಧರ್ಮಪ್ಪ, ಮಹೇಶ್, ಸಿದ್ದಪ್ಪ, ತೋಪೇಗೌಡ, ಜವರಯ್ಯ, ಗೋಪಣ್ಣ, ಪುಟ್ಟರಾಜು, ಎಚ್.ಬಿ.ಧರ್ಮಪ್ಪ, ಸುವರ್ಣ, ಅಪ್ಪಾಜಿ, ಮಹೇಶಾಚಾರಿ, ರತ್ನಮ್ಮ ಸುರೇಶ್ ಪಾಲ್ಗೊಂಡಿದ್ದರು. ಕಾಫಿ ಬೆಳೆಗಾರ ಯತೀಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.