ADVERTISEMENT

ಬಿಡುಗಡೆ ಕನವರಿಕೆಯಲ್ಲಿ 14 ವರ್ಷದಿಂದ ಗೋಳಾಡುತ್ತಿರುವ ಪೋಷಕರು

ಪಾಕಿಸ್ತಾನದಲ್ಲಿ ಬಂಧಿಯಾದ ರಮೇಶ್‌, ವಿದೇಶಾಂಗ ಇಲಾಖೆಗೆ ಪತ್ರ ಬರೆದ ತಂದೆ– ತಾಯಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 13:48 IST
Last Updated 13 ಅಕ್ಟೋಬರ್ 2020, 13:48 IST

ಗೋಣಿಕೊಪ್ಪಲು: 14 ವರ್ಷಗಳ ಹಿಂದೆ ಮೈಸೂರಿನಿಂದ ಕಾಣೆಯಾದ ಮಗನ ಕನವರಿಕೆಯಲ್ಲಿಯೇ ಇಲ್ಲಿನ ಕಳತ್ಮಾಡು ನಿವಾಸಿಗಳಾದ ಪಡಿಕಲ್ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿಗಳು ದಿನ ದೂಡುತ್ತಿದ್ದಾರೆ.

18ರ ಹರೆಯದಲ್ಲಿದ್ದ ರಮೇಶ್ 2006ರಲ್ಲಿ ಇಲ್ಲಿನ ಕಾವೇರಿ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತನಿಗೆ ಹಾಜರಾತಿ ಕೊರತೆಯಿಂದ ಆ ವರ್ಷದಲ್ಲಿ ಪರೀಕ್ಷೆ ಕೂರಲು ಸಾಧ್ಯವಾಗಲಿಲ್ಲ. ಇದರಿಂದ ಪೋಷಕರು ಮೈಸೂರಿನ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದರು. 6 ತಿಂಗಳ ಕಾಲ ವಿದ್ಯಾಭ್ಯಾಸ ಮಾಡಿದ ರಮೇಶ್, ಬಳಿಕ ಅಲ್ಲಿಯೂ ಶಾಲೆ ತೊರೆದು ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದ ಎನ್ನಲಾಗಿದೆ.

2007ರಲ್ಲಿ ತಂದೆ–ತಾಯಿಯಿಂದ ದೂರವಾದ ಈತ ಮತ್ತೆ ಸಂಪರ್ಕಕ್ಕೆ ದೊರಕಲಿಲ್ಲ. ಮಗ ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪಾಕಿಸ್ತಾನದ ಲಾಹೋರ್‌ನಲ್ಲಿ ಬಂಧಿಯಾದ ಭಾರತದ ಪ್ರಜೆಗಳ ಭಾವಚಿತ್ರ 2014ರಲ್ಲಿ ಪತ್ರಿಕೆಯಲ್ಲಿ ಪಕಟವಾಗಿತ್ತು. ಇದು ತಪ್ಪಿಸಿಕೊಂಡಿದ್ದ ರಮೇಶನ ಭಾವಚಿತ್ರವನ್ನು ಹೋಲುವಂತಿತ್ತು. ಪೊಲೀಸ್ ಇಲಾಖೆಯ ಮೂಲಕ ಇದನ್ನು ಗಮನಿಸಿದ ಕುಶಾಲಪ್ಪ ದಂಪತಿ, ಈತ ತಮ್ಮ ಮಗನೇ ಇರಬಹುದು ಎಂದು ಊಹಿಸಿ ಮಗನನ್ನು ಭೇಟಿ ಮಾಡಲು ಬಯಸಿ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಗೆ ಪತ್ರ ಬರೆದರು.

ADVERTISEMENT

ಈ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳು ಕೂಡ ಕುಶಾಲಪ್ಪ ಅವರಿಗೆ ಮರು ಪತ್ರ ಬರೆದು ಮಗನನ್ನು ಪಾಕಿಸ್ತಾನದಿಂದ ಬಿಡಿಸಿಕೊಂಡು ಬರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇಂತಹ ವ್ಯವಹಾರದ ಮೂಲಕ ಇದೀಗ 14 ವರ್ಷ ಕಳೆದು ಹೋಯಿತು.

ಇದೀಗ ಮತ್ತೆ ಕುಶಾಲಪ್ಪ ದಂಪತಿ ಹೈಕೋರ್ಟ್ ವಕೀಲ ಶ್ರೀನಿವಾಸ್‌ರಾವ್ ಮೂಲಕ ವಿದೇಶಾಂಗ ಇಲಾಖೆಗೆ ಪತ್ರ ಬರೆದು ಮಗನನ್ನು ಆದಷ್ಟು ಬೇಗ ಬಿಡಿಸಿಕೊಂಡು ಬರಲು ಮನವಿ ಮಾಡಿಕೊಂಡಿದ್ದು ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಇದಕ್ಕೆ ಸ್ಪಂದಿಸಿರುವ ವಿದೇಶಾಂಗ ಕಾರ್ಯದರ್ಶಿ ಶ್ವೇತಾ ಸಿಂಗ್ ಅವರು ವಕೀಲ ಶ್ರೀನಿವಾಸ್ ರಾವ್ ಅವರಿಗೆ ಕಳೆದ ಆಗಸ್ಟ್‌ನಲ್ಲಿ ಪತ್ರ ಬರೆದು ಕೂಡಲೇ ಪಾಕಿಸ್ತಾನದೊಂದಿಗೆ ಸಂಪರ್ಕ ಬೆಳೆಸಿ ಮಗನನನ್ನು ಕರೆತರಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದ್ದಾರೆ.

‘ನಮ್ಮ ವಕೀಲರು ವಿದೇಶಾಂಗ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪಾಕಿಸ್ತಾನದಲ್ಲಿ ಮಗ ಯಶವಂತ್ ಎಂದು ಹೆಸರು ಬದಲಾಯಿಸಿಕೊಂಡಿರುವ ಬಗ್ಗೆ ಮಾಹಿತಿಯಿದೆ. ಡಿಎನ್‌ಎ ಟೆಸ್ಟ್ ಆದ ಬಳಿಕ ಎಲ್ಲವೂ ಖಚಿತವಾಗಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯುತ್ತೀದ್ದೇವೆ. ಈಗ ಅವನಿಗೆ 32 ವರ್ಷ ಪ್ರಾಯವಾಗಿದೆ’ ಎಂದು ಯುವಕ ರಮೇಶನ ತಾಯಿ ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.