
ಮಡಿಕೇರಿ: ತಾಲ್ಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಆರೋಪಿಯೊಬ್ಬ ತನ್ನ ಅಪ್ಪನನ್ನೇ ಕೊಂದು ಸುಟ್ಟು ಹಾಕಿದ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಮೂಳೆ ಹಾಗೂ ಬೂದಿಗಳೂ ಈಗ ಪೊಲೀಸರ ವಶವಾಗಿವೆ. ಪ್ರಕರಣದಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ ತೋಟದ ಮಾಲೀಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.
‘ಪ್ರಮುಖ ಆರೋಪಿ ಪಶ್ಚಿಮ ಬಂಗಾಳದ ಪ್ರಶಾಂತ ಮುದಿ (27) ಎಂಬಾತ ಸಿಟ್ಟಿನಲ್ಲಿ ಭಾನುವಾರ ತನ್ನ ತಂದೆಗೆ ರಿಪೀಸ್ ಪಟ್ಟಿಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ, ಮೃತದೇಹವನ್ನು ಮಡಿಕೇರಿಯ ಸ್ಮಶಾನದಲ್ಲಿ ಇದು ಸಹಜ ಸಾವು ಎಂದು ಸುಳ್ಳು ಹೇಳಿ ಸುಟ್ಟು ಹಾಕಲಾಗಿತ್ತು. ನಂತರ, ಶವದ ಬೂದಿ ಹಾಗೂ ಮೂಳೆಯನ್ನೂ ಬಿಡಬಾರದೆಂದುಕೊಂಡು ಆರೋಪಿಗಳು ಮರುದಿನ ಬೆಳಿಗ್ಗೆ ಸ್ಮಶಾನಕ್ಕೆ ಬಂದು ಬೂದಿ ಮತ್ತು ಮೂಳೆಗಳನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿ, ಬೂದಿ ಮತ್ತು ಮೂಳೆಗಳನ್ನು ವಶಪಡಿಸಿಕೊಂಡು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ತೋಟದ ಮಾಲೀಕರು ಮೃತದೇಹ ಸುಡಲು ನೆರವಾಗಿದ್ದರು. ವಾಹನದಲ್ಲಿ ಸ್ಮಶಾನಕ್ಕೆ ತಂದು ಸುಡಲಾಗಿತ್ತು. ಹೀಗಾಗಿ, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಇನ್ನು ಮುಂದೆ ಹೊರರಾಜ್ಯದ ಕಾರ್ಮಿಕರು ನಡೆಸುವ ಅಪರಾಧ ಕೃತ್ಯಗಳನ್ನು ಮುಚ್ಚಿಡುವ ತೋಟದ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕೆಲಸಕ್ಕೆ ಕಾರ್ಮಿಕರು ಸಿಕ್ಕುವುದಿಲ್ಲ ಎಂದು ಅವರು ಮಾಡುವ ಅಪರಾಧ ಕೃತ್ಯಗಳನ್ನು ಕಂಡು ಕಾಣದಂತಿದ್ದರೆ ಅದೂ ಸಹ ಅಪರಾಧವಾಗುತ್ತದೆ. ಹಾಗಾಗಿ, ತೋಟದ ಮಾಲೀಕರು ತಮ್ಮಲ್ಲಿ ಕೆಲಸ ಮಾಡುವ ಹೊರರಾಜ್ಯದ ಕಾರ್ಮಿಕರ ಕುರಿತು ಅತೀವ ಎಚ್ಚರಿಕೆ ವಹಿಸಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‌ಕುಮಾರ್, ಡಿವೈಎಸ್‌ಪಿ ಸೂರಜ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಚ್.ವಿ.ಚಂದ್ರಶೇಖರ್, ಸಬ್‌ಇನ್‌ಸ್ಪೆಕ್ಟರ್ ಜವರೇಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.