ADVERTISEMENT

ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋದಿ ಆರಾಧನೆ

ಪರದಂಡ ಕುಟುಂಬಸ್ಥರಿಂದ ಬೆಳೆ ರಕ್ಷಣೆ, ಸುಖ ಸಮೃದ್ಧಿಗಾಗಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:00 IST
Last Updated 28 ಅಕ್ಟೋಬರ್ 2025, 5:00 IST
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಇಗ್ಗುತ್ತಪ್ಪ ದೇವಾಲಯವನ್ನು ಸೋಮವಾರ ಪತ್ತಾಲೋದಿ ಆಚರಣೆಗಾಗಿ ಪುಷ್ಪತೋರಣಗಳಿಂದ ಆಲಂಕರಿಸಲಾಗಿತ್ತು
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಇಗ್ಗುತ್ತಪ್ಪ ದೇವಾಲಯವನ್ನು ಸೋಮವಾರ ಪತ್ತಾಲೋದಿ ಆಚರಣೆಗಾಗಿ ಪುಷ್ಪತೋರಣಗಳಿಂದ ಆಲಂಕರಿಸಲಾಗಿತ್ತು   

ನಾಪೋಕ್ಲು: ಸಮೀಪದ ಕಕಬ್ಬೆಯ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಪತ್ತಾಲೋದಿ ಉತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು.

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಜರುಗಿದ ಬಳಿಕ 10ನೇ ದಿನ ಕೊಡವ ಸಂಪ್ರದಾಯಸ್ಥರ ಮನೆಗಳಲ್ಲಿ ಕಣಿ ಪೂಜೆ ನಡೆಯುವುದು. ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಪರದಂಡ ಕುಟುಂಬಸ್ಥರು ಸೋಮವಾರ ಉತ್ಸವ ನೆರವೇರಿಸಿದರು. ಪಾಲ್ ಬೈವಾಡ್ ನೊಂದಿಗೆ ಪರದಂಡ ಕುಟುಂಬಸ್ಥರು ದೇವಾಲಯಕ್ಕೆ ಆಗಮಿಸಿದರು. ಬಳಿಕ ವಿವಿಧ ಆಚರಣೆಗಳನ್ನು ಕೈಗೊಂಡರು. ದೇವಾಲಯ ಹಾಗೂ ಗರ್ಭಗುಡಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯೊಂದಿಗೆ ದೇವರ ನೃತ್ಯ ಬಲಿ ಜರುಗಿತು.

ಕಾವೇರಿ ಜಾತ್ರೆಯು ಕಳೆದು ಮುಂದೆ ನಾಲ್ಕು ವಾರಗಳಲ್ಲಿ ಕೂಡಿಬರುವ ವೃಶ್ಚಿಕ ಸಂಕ್ರಮಣದಂದು ಕಿರು ಜಾತ್ರೆಯು ಜರುಗುತ್ತದೆ ಕಿರು ಸಂಕ್ರಮಣ ಎಂದು ಕರೆಯಲ್ಪಡುವ ಕಿರು ಜಾತ್ರೆಯ ಸಂದರ್ಭವೂ ಕಾವೇರಿ ಜಾತ್ರೆಯು ಔಪಚಾರಿಕವಾಗಿ ಮುಕ್ತಾಯವಾಗುವ ಹಾಗೂ ಕಾವೇರಿ ತೀರ್ಥ ಸ್ಥಾನಕ್ಕೆ ಪ್ರಶಸ್ತವಾದ ತುಲಾ ಮಾಸವು ಮುಕ್ತಾಯಗೊಳ್ಳುವ ಪವಿತ್ರ ದಿನ. ಆ ದಿನ ಅನೇಕ ಭಕ್ತರು ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ವೃಶ್ಚಿಕ ಸಂಕ್ರಮಣದಂದು ಕೂಡ ಭಾಗಮಂಡಲದಲ್ಲಿ ಭಕ್ತರು ಪಿತೃಪ್ರಿಯ, ದೇವ ಕ್ರಿಯೆಗಳನ್ನು ನಡೆಸುತ್ತಾರೆ. ತಲಕಾವೇರಿಯಲ್ಲಿ ಶ್ರೀ ಕಾವೇರಮ್ಮನ ಪುಣ್ಯ ತೀರ್ಥ ಸ್ನಾನ ಮಾಡಿ ಮಹಾತಾಯಿಗೆ ಪೂಜಾದಿ ಸೇವೆಗಳನ್ನು ಸಲ್ಲಿಸುತ್ತಾರೆ.

ADVERTISEMENT

ಆದಿಮಾತೆ ಶ್ರೀ ಕಾವೇರಿಯ ತೀರ್ಥೋದ್ಭವ ಕಳೆದು ಸಂಪ್ರದಾಯಸ್ಥರ ಮನೆಗಳಲ್ಲಿ ಜರುಗುವ ಕಣಿಪೂಜೆಯ ದಿನದ ಸೂರ್ಯೋದಯದಿಂದ ಸರಿಯಾಗಿ ಹತ್ತನೇ ಸೂರ್ಯೋದಯದ ದಿನದಂದು ಕೊಡಗಿನಾದ್ಯಂತ ಪತ್ತಾಲೋದಿ (ಹತ್ತನೇ ಪವಿತ್ರ ದಿನ) ‘ತೊಲೆಯಾರ್ ಪತ್ತ್’ ಎಂಬ ಪ್ರತೀತಿ ಪಡೆದಿದೆ. ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಈ ದಿನ ಕೊಡವ ಸಂಪ್ರದಾಯದಂತೆ ಕೈಗೊಳ್ಳುವ ಯಾವುದೇ ಕಾರ್ಯವು ಕಾರ್ಯಗತವಾಗುವುದಲ್ಲದೇ, ದೇವಾ ನುಗ್ರಹದೊಂದಿಗೆ ಅಕ್ಷಯವಾಗುವುದೆಂಬ ನಂಬಿಕೆ ಇದೆ.

ಪಾಡಿಯಲ್ಲಿ ಪರದಂಡ ಕುಟುಂಬಸ್ಥರ ವತಿಯಿಂದ ಸಂಪ್ರದಾಯದಂತೆ ಸೋಮವಾರ ತೊಲೆಯಾರ್ ಪತ್ತ್ ಆರಾಧನೆ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದು ತುಲಾಭಾರ ಸೇವೆಗಳು, ಮಹಾಪೂಜೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ದೇವರ ನೃತ್ಯ ಬಲಿ ನಡೆದು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭ ಪರದಂಡ ಕುಟುಂಬಸ್ಥರು ಬೆಳೆ ರಕ್ಷಣೆ, ಸುಖ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಅನ್ನ ಸಂತರ್ಪಣೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.

ನಾಪೋಕ್ಲು ಸಮೀಪದ ಕಕ್ಕಬ್ಬೆಯ ಇಗ್ಗುತ್ತಪ್ಪ ದೇವಾಲಯದಲ್ಲಿ ಸೋಮವಾರ ದೇವರ ನೃತ್ಯಬಲಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.