
ಮಡಿಕೇರಿ: ಕಳೆದ 3 ದಿನಗಳಿಂದ ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ನಡೆಯುತ್ತಿದ್ದ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಶನಿವಾರ ಸಂಭ್ರಮದ ತೆರೆ ಬಿತ್ತು.
ಸಮಾರೋಪ ಭಾಷಣ ಮಾಡಿದ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ‘ಸೋಲು ಎದುರಾದಾಗ ಅದನ್ನು ಸವಾಲಾಗಿ ಸ್ವೀಕರಿಸಬೇಕು ಮಾತ್ರವಲ್ಲ ಸಮತೋಲನದಿಂದ ಮುನ್ನಡೆದು ಗೆಲುವು ಸಾಧಿಸಬೇಕು’ ಎಂದು ಹೇಳಿದರು.
ಪ್ರಸ್ತುತ ಜಗತ್ತಿನಲ್ಲಿ ಸೋಲು ಎದುರಾದಾಗ ಸವಾಲಾಗಿ ಸ್ವೀಕರಿಸುವ ಮನೋಭಾವ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕ್ರೀಡೆ ಅಥವಾ ಯಾವುದೇ ಸನ್ನಿವೇಶ ಇರಲಿ ಸವಾಲಾಗಿ ಸ್ವೀಕರಿಸಿ, ಸಮತೋಲನದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕ್ರೀಡೆ ಎನ್ನುವುದು ಕೇವಲ ದೈಹಿಕ ಕಾರ್ಯಕ್ಷಮತೆ ಹೆಚ್ಚಿಸುವುದಕ್ಕೆ ಮಾತ್ರ ರಹದಾರಿ ಅಲ್ಲ. ಅದರೊಂದಿಗೆ ಒಂದು ತಂಡವಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಕ್ರೀಡೆ ಕಲಿಸುತ್ತದೆ. ಹಾಗಾಗಿ, ಪೊಲೀಸರಿಗೆ ಕ್ರೀಡೆ ಅನಿವಾರ್ಯ ಮಾತ್ರವಲ್ಲ ಅಗತ್ಯವೂ ಆಗಿದೆ ಎಂದು ಪ್ರತಿಪಾದಿಸಿದರು.
ಪೊಲೀಸರು ನಿತ್ಯವೂ ಕ್ರೀಡೆ ಹಾಗೂ ವ್ಯಾಯಾಮದ ಮೂಲಕ ದಿನವನ್ನು ಆರಂಭಿಸಬೇಕು. ಆಗ ಮಾತ್ರ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಎಂದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‌ಕುಮಾರ್ ಭಾಗವಹಿಸಿದ್ದರು.
ನಂತರ, ಪೊಲೀಸರ ಸಾಂಸ್ಕೃತಿಕ ಸಂಜೆಯಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಪೊಲೀಸರೇ ಪ್ರಸ್ತುತಪಡಿಸಿದರು
ಫಲಿತಾಂಶ: ಉತ್ತಮ ಮಾರ್ಚ್‌ಫಾಸ್ಟ್ ಗೌರವಕ್ಕೆ ಡಿಎಆರ್ ಪಾತ್ರವಾದರೆ, ಪುರುಷರ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮಡಿಕೇರಿಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಎಚ್.ಎಸ್.ಸಂಜು ಹಾಗೂ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಬಿ.ಎಂ.ಭವ್ಯಾ ಪಾತ್ರರಾದರು. ಡಿಎಆರ್ ಟೀಂ ಚಾಂಪಿಯನ್ ಗೌರವ ಪಡೆದುಕೊಂಡಿತು.
ಕಬ್ಬಡ್ಡಿ: ಡಿಎಆರ್ (ಪ್ರ), ಮಡಿಕೇರಿ (ದ್ವಿ), ಹಗ್ಗಜಗ್ಗಾಟ: ಸೋಮವಾರಪೇಟೆ (ಪ್ರ), ಡಿಎಆರ್ (ದ್ವಿ), ವಾಲಿಬಾಲ್: ಡಿಎಆರ್ (ಪ್ರ), ವಿರಾಜಪೇಟೆ (ದ್ವಿ)
ಕ್ರಿಕೆಟ್: ಮಡಿಕೇರಿ (ಪ್ರ), ವಿರಾಜಪೇಟೆ (ದ್ವಿ), ಥ್ರೋಬಾಲ್ (ಮಹಿಳೆಯರು): ಮಡಿಕೇರಿ (ಪ್ರ), ವಿಶೇಷ ಘಟಕ (ದ್ವಿ), ಹಗ್ಗಜಗ್ಗಾಟ (ಮಹಿಳೆಯರು): ವಿಶೇಷ ಘಟಕ (ಪ್ರ), ಮಡಿಕೇರಿ (ದ್ವಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.