ADVERTISEMENT

ವಿರಾಜಪೇಟೆ: ಅಭಿವೃದ್ಧಿಗಾಗಿ ಕಾದಿರುವ ಕೆರೆಗಳು

ಕೆರೆಗಳ ಒಡಲು ಸೇರುತ್ತಿರುವ ಚರಂಡಿ ನೀರು l ನಿರ್ವಹಣೆ, ಅಭಿವೃದ್ಧಿ ಕೊರತೆ l ಹೂಳಿನಿಂದ ಅವಸಾನದತ್ತ ನೀರಿನ ಮೂಲಗಳು

ಹೇಮಂತಕುಮಾರ್ ಎಂ.ಎನ್‌
Published 11 ಫೆಬ್ರುವರಿ 2021, 12:15 IST
Last Updated 11 ಫೆಬ್ರುವರಿ 2021, 12:15 IST
ಶಿವಕೇರಿಯ ಅಕ್ಕಚ್ಚಮ್ಮನ ಕೆರೆ
ಶಿವಕೇರಿಯ ಅಕ್ಕಚ್ಚಮ್ಮನ ಕೆರೆ   

ವಿರಾಜಪೇಟೆ: ನೀರಿದ್ದರೆ ಊರು, ನೀರಿದ್ದರೆ ನಾವು, ನೀರಿದ್ದರೆ ಎಲ್ಲಾ...!! ಎಂಬ ಮಾತಿನಂತೆ ನೀರು ಜೀವಜಗತ್ತಿನ ಮೂಲ ಸೆಲೆ. ಆದ್ದರಿಂದ, ನಮ್ಮ ಸುತ್ತಲಿನಲ್ಲಿರುವ ನೀರು ಹಾಗೂ ನೀರಿನ ಮೂಲದ ಸಂರಕ್ಷಣೆ ಸರ್ಕಾರ ಹಾಗೂ ಸಾರ್ವಜನಿಕರ ಹೊಣೆಯಾಗಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ಕೆಲವು ಶತಮಾನಗಳಷ್ಟು ಇತಿಹಾಸವಿರುವ ಕೆರೆಗಳಿದ್ದು, ಅಭಿವೃದ್ಧಿ ಹಾಗೂ ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬೀಳುವಂತಾಗಿದೆ. ಅಗತ್ಯ ಸಂದರ್ಭಗಳಲ್ಲಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಈ ಕೆರೆಗಳು ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಕಾದಿವೆ.

ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿಯಾವುದೇ ಉದ್ಯಾನಗಳಿಲ್ಲ. ಹೀಗಾಗಿ ಪ್ರವಾಸೋದ್ಯಮ ದೃಷ್ಟಿಯಿಂದ ಇಲ್ಲಿನ ಕೆರೆಗಳನ್ನು ಉದ್ಯಾನದೊಂದಿಗೆ ಅಭಿವೃದ್ಧಿಗೊಳಿಸುವ ಮಾತುಗಳು ಸಾಕಷ್ಟು ಹಿಂದಿನಿಂದಲೂ ಕೇಳಿಬಂದಿದೆ. ಆದರೂ, ಇಲ್ಲಿಯವರೆಗೆ ಈ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಕೆಲವು ಕೆರೆಗಳ ಕನಿಷ್ಠ ನಿರ್ವಹಣೆಯು ಸಾಧ್ಯವಾಗಿಲ್ಲ. ಪಟ್ಟಣದ ವ್ಯಾಪ್ತಿಯಲ್ಲಿ ಚಿಕ್ಕಪೇಟೆ ಸಮೀಪದ ಛತ್ರಕೆರೆ, ಶಿವಕೇರಿಯ ಅಕ್ಕಚ್ಚಮ್ಮನ ಕೆರೆ, ಖಾಸಗಿ ಬಸ್ ನಿಲ್ದಾಣದ ಸಮೀಪದ ಗೌರಿಕೆರೆ ಹಾಗೂ ಸುಂಕದ ಕಟ್ಟೆಯ ಪಂಪ್‌ಕೆರೆ ಎಂಬ 4 ಕೆರೆಗಳಿವೆ. ಇವುಗಳ ಪೈಕಿ ಕೊಂಚವೂ ಅಭಿವೃದ್ಧಿ ಕಾಣದಿರುವ ಕೆರೆಗಳೆಂದರೆ ಅಕ್ಕಚ್ಚಮ್ಮನ ಕೆರೆ ಹಾಗೂ ಪಂಪ್ ಕೆರೆಯಾಗಿವೆ.

ADVERTISEMENT

ಅಕ್ಕಚ್ಚಮ್ಮನ ಕೆರೆಗೆ ಕೊಳಚೆ ನೀರು: ಶಿವಕೇರಿಯಲ್ಲಿನ ಅಕ್ಕಚ್ಚಮ್ಮನ ಕೆರೆಯು ಈವರೆಗೂ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ. ಅನೇಕ ವರ್ಷಗಳಿಂದ ಕೆರೆಯ ಹೂಳನ್ನು ತೆಗೆಯುವ ಕಾರ್ಯವಾಗಿಲ್ಲ. ಕೆರೆಯ ಸುತ್ತಲು ರಕ್ಷಣಾ ಬೇಲಿಯಾಗಲಿ, ತಡೆಗೋಡೆಯನ್ನಾಗಲಿ ನಿರ್ಮಿಸಿಲ್ಲ. ಇದೀಗ ಚರಂಡಿಯಲ್ಲಿ ಹರಿಯುವ ಕೊಳಚೆ ನೀರು ಈ ಕೆರೆಯ ಒಡಲು ಸೇರುತಿದೆ. ಇದರಿಂದ ಕೆರೆ ಮತ್ತಷ್ಟು ಕಲುಷಿತಗೊಳ್ಳುತ್ತಿದ್ದು, ಈ ಕುರಿತು ಸಂಬಂಧಿಸಿದವರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನವರು ಬೇಸರ ವ್ಯಕ್ತಪಡಿಸುತ್ತಾರೆ.

ಕಳೆಗಿಡಗಳಿಂದ ಮುಚ್ಚಿರುವ ಪಂಪ್‌ ಕೆರೆ: ಪಟ್ಟಣದ ಸುಂಕದಕಟ್ಟೆಯಲ್ಲಿನ ಪಂಪ್ ಕೆರೆಯಂತು ಕಳೆಗಿಡಗಳು ಬೆಳೆದು ಕೆರೆಯಲ್ಲಿನ ನೀರೆ ಕಾಣಿಸದಂತಾಗಿದೆ. ಯಾವುದೇ ತಡೆಗೋಡೆಯಾಗಲಿ ಅಥವಾ ರಕ್ಷಣಾ ಬೇಲಿಯನ್ನಾಗಲಿ ಇಲ್ಲಿಲ್ಲ. ಜೊತೆಗೆ, ಹೂಳು ತುಂಬಿಕೊಂಡು ನೀರಿನ ಸಂಗ್ರಹ ಸಾಮರ್ಥ್ಯವು ಸಾಕಷ್ಟು ಕಡಿಮೆಯಾಗಿದೆ. ಇದೇ ರೀತಿ ಇನ್ನು ಕೆಲವು ವರ್ಷಗಳು ಮುಂದುವರಿದರೆ ಕೆರೆಯೇ ಮುಚ್ಚಿಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೆದ್ದಾರಿಯ ಸಮೀಪದಲ್ಲಿ ಎರಡು ಬೆಟ್ಟಗಳ ನಡುವಿನ ಜಾಗದಲ್ಲಿರುವ ಪಂಪ್‍ಕೆರೆಯನ್ನು ಅಭಿವೃದ್ಧಿಗೊಳಿಸಿದರೆ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಅನುಕೂಲವಾಗಬಹುದು.

ಮೀನು ಸಾಕಣೆಗೆ ಸೀಮಿತವಾದ ಛತ್ರ ಕೆರೆ: ಇವುಗಳಲ್ಲಿ ಛತ್ರಕೆರೆ ಹಾಗೂ ಗೌರಿಕೆರೆಯ ಸುತ್ತಲು ಕನಿಷ್ಠ ರಕ್ಷಣಾಗೋಡೆ ಹಾಗೂ ಬೇಲಿಯನ್ನು ನಿರ್ಮಿಸಿ, ಕೆರೆ ಸಂರಕ್ಷಣೆಯತ್ತ ಕೊಂಚ ಗಮನಹರಿಸಲಾಗಿದೆ. ಇದರಲ್ಲಿ ಛತ್ರಕೆರೆಯನ್ನು ಅಭಿವೃದ್ಧಿಗೊಳಿಸುವ ಮಾತುಗಳು ಈ ಹಿಂದೆ ಸಾಕಷ್ಟು ಬಾರಿ ಕೇಳಿ ಬಂದರೂ, ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಹಿಂದೆ ಸಾಕಷ್ಟು ಬಾರಿ ಕೆರೆಯಲ್ಲಿ ಬೋಟಿಂಗ್ ಹಾಗೂ ಸುತ್ತಲು ಉದ್ಯಾನ ನಿರ್ಮಿಸಿ, ಪ್ರವಾಸಿ ತಾಣವಾಗಿಸಲಾಗುವುದು ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಛತ್ರಕೆರೆಯಲ್ಲಿ ಮೀನು ಸಾಕಲು ಟೆಂಡರ್ ನೀಡಲಾಗಿದೆ. ಅಷ್ಟರಮಟ್ಟಿಗೆ ಈ ಕೆರೆಯನ್ನು ಸದ್ಭಳಕೆ ಮಾಡಲಾಗುತ್ತಿದೆಯಷ್ಟೆ.

ಗೌರಿ ಕೆರೆ ಗೌರಿಗಣೇಶ ಮೂರ್ತಿಗಳ ವಿಸರ್ಜನೆಗೆ ಸೀಮಿತ: ಪಟ್ಟಣದ ಹೃದಯಭಾಗದಲ್ಲಿರುವ ಗೌರಿಕೆರೆ ಮಾತ್ರ ಗಣೇಶ ಹಬ್ಬದ ಸಂದರ್ಭದಲ್ಲಿ ಗೌರಿಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಸೀಮಿತವಾಗಿದೆ. ಈ ಸಂದರ್ಭದಲ್ಲಿ ಗೌರಿಕೆರೆಯನ್ನು ಶುಚಿಗೊಳಿಸಿ, ಅಲಂಕರಿಸಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಕೆರೆಯು ಕೂಡ ಹೇಳಿಕೊಳ್ಳುವಂತ ಅಭಿವೃದ್ಧಿಯನ್ನು ಕಾಣಲಿಲ್ಲ. ಇದೀಗ ಗೌರಿಕೆರೆ ಹೂಳು ಹಾಗೂ ಕಸಕಡ್ಡಿಗಳಿಂದ ತುಂಬಿಕೊಂಡು ಅಶುಚಿತ್ವದಿಂದ ಕೂಡಿದೆ.

ಈಗಲಾದರೂ ಹಿಂದೆ ಹೆಳಿದ ಮಾತಿನಂತೆ ನಡೆದುಕೊಂಡು ಕೆರೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುತ್ತಾರಾ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.