ADVERTISEMENT

ತಲಕಾವೇರಿಯ ಗಜಗಿರಿಯಲ್ಲಿ 800 ಇಂಗುಗುಂಡಿ ಮುಚ್ಚಿಸಿದ ಕೊಡಗು ಜಿಲ್ಲಾಡಳಿತ

ಅನಾಹುತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ, ಇಂಗುಗುಂಡಿ ಮುಚ್ಚಲು ಸೂಚಿಸಿದ್ದ ತಜ್ಞರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 11:47 IST
Last Updated 9 ಜೂನ್ 2021, 11:47 IST
ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡಲಾಯಿತು
ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡಲಾಯಿತು   

ಮಡಿಕೇರಿ/ನಾಪೋಕ್ಲು: ಮುಂಗಾರು ಆರಂಭವಾಗುತ್ತಿದ್ದಂತೆಯೇ ಕೊಡಗು ಜಿಲ್ಲಾಡಳಿತವು ಮಳೆಯ ಅನಾಹುತ ತಪ್ಪಿಸಲು ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ತಲಕಾವೇರಿಯ ಗಜಗಿರಿಯಲ್ಲಿ ತೆಗೆದಿದ್ದ ಸುಮಾರು 800 ಇಂಗುಗುಂಡಿಗಳನ್ನು ಮುಚ್ಚಿಸಿದೆ.

ಕಳೆದ ವರ್ಷದ ಆಗಸ್ಟ್‌ 6ರಂದು ತಲಕಾವೇರಿಯ ಗಜಗಿರಿ ಕುಸಿತದಿಂದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಸೇರಿ ಐವರು ಭೂಸಮಾಧಿ ಆಗಿದ್ದರು. ಬೆಟ್ಟ ಕುಸಿಯಲು ಗಜಗಿರಿ ಬೆಟ್ಟದಲ್ಲಿ ತೆಗೆದಿದ್ದ ಇಂಗುಗುಂಡಿಗಳೇ ಕಾರಣವೆಂದು ತಜ್ಞರು ವರದಿ ನೀಡಿದ್ದರು. ಮಳೆಗಾಲದಲ್ಲಿ ನೀರು ಒಳಕ್ಕೆ ಇಳಿದು ಬೆಟ್ಟವು ಸಡಿಲಗೊಂಡು, ಅತಿಯಾದ ಮಳೆಯಿಂದ ಒತ್ತಡ ಉಂಟಾಗಿ ಭೂಕುಸಿತವಾಗಿದೆ ಎಂದು ತಜ್ಞರೂ 16 ಪುಟಗಳ ವರದಿ ಸಲ್ಲಿಸಿದ್ದರು.

ತಜ್ಞರಾದ ಕಪಿಲ್‌ ಸಿಂಗ್‌ ಹಾಗೂ ಕಮಲ್‌ ಕುಮಾರ್‌ ಅವರು ತಲಕಾವೇರಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಬೆಟ್ಟದ ಮೇಲೆ ಉಂಟಾದ ಬಿರುಕು, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಅನಗತ್ಯ ಮಾನವ ಹಸ್ತಕ್ಷೇಪ, ಅಧಿಕ ಮಳೆಯಿಂದ ಭೂಕುಸಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. 2015-16 ಹಾಗೂ 2016–17ನೇ ಸಾಲಿನಲ್ಲಿ ನಿರ್ಮಿಸಿದ್ದ ಇಂಗುಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆಯೂ ಭಾಗಮಂಡಲದಲ್ಲಿ ನಡೆದಿದ್ದ ಈ ಹಿಂದೆ ನಡೆದಿದ್ದ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು.

ADVERTISEMENT

ಅನಾಹುತದ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತುಗೊಂಡಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಮಾರ್ಗದರ್ಶನದಲ್ಲಿ ಬ್ರಹ್ಮಗಿರಿ ಹಾಗೂ ಗಜಗಿರಿ ಬೆಟ್ಟದಲ್ಲಿದ್ದ 800 ಇಂಗುಗುಂಡಿಗಳನ್ನು ಕಾರ್ಮಿಕರ ಸಹಾಯದಿಂದ ಮುಚ್ಚಿಸಲಾಗಿದೆ.

‘ಭೂಕುಸಿತ ತಡೆಗಟ್ಟಲು ಹಣ್ಣಿನ ಗಿಡಗಳನ್ನು ನೆಟ್ಟು ಹುಲ್ಲಿನ ಬೀಜಗಳನ್ನು ಬಿತ್ತಲಾಗಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ನೈಸರ್ಗಿಕವಾಗಿ ಬರುವಂತಹ ಆಮೆ, ಸೀಬೆ ಮುಂತಾದ ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ, ನಾಟಿ ಮಾಡಲಾಗಿದೆ. ವೆಟ್ರಿವೇರ ಜಾತಿಯ ಹುಲ್ಲನ್ನು ನಾಟಿ ಮಾಡಲಾಗಿದೆ. ಹಸಿರೀಕರಣ ಹೆಚ್ಚಿಸಲು ನೇರಳೆ, ಸೀಬೆ ಗಿಡಗಳ ಜೊತೆಗೆ 10 ಕೆ.ಜಿ ಬಿದಿರು ಬೀಜಗಳನ್ನು ನಾಟಿ ಮಾಡಲಾಗಿದೆ’ ಎಂದು ಭಾಗಮಂಡಲದ ವಲಯ ಅರಣ್ಯಾಧಿಕಾರಿ ಎಚ್‌.ಜಿ.ದೇವರಾಜು ತಿಳಿಸಿದ್ದಾರೆ.‌

ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು ಎನ್‌ಡಿಆರ್‌ಎಫ್‌ ಸಹ ಜಿಲ್ಲೆಯಲ್ಲೇ ಬೀಡುಬಿಟ್ಟಿದೆ. ತಲಕಾವೇರಿ, ಭಾಗಮಂಡಲ ಹಾಗೂ ಚೇರಂಗಾಲದ ಭೂಕುಸಿತ ಸ್ಥಳಕ್ಕೆ ರಕ್ಷಣಾ ತಂಡವು ಭೇಟಿ ನೀಡಿ ಪರಿಶೀಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.