ADVERTISEMENT

ಕೊಡಗು | ವಿದ್ಯುತ್ ವ್ಯತ್ಯಯ; ಸೆಸ್ಕ್ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 5:28 IST
Last Updated 5 ಜುಲೈ 2023, 5:28 IST
ವಿದ್ಯುತ್ ವ್ಯತ್ಯಯ (ಪ್ರಾತಿನಿಧಿಕ ಚಿತ್ರ)
ವಿದ್ಯುತ್ ವ್ಯತ್ಯಯ (ಪ್ರಾತಿನಿಧಿಕ ಚಿತ್ರ)   

ಮಡಿಕೇರಿ: ಕಳೆದೊಂದು ವರ್ಷದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಸೆಸ್ಕ್‌ನ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಮುತ್ತಾರ್ಮುಡಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಒಟ್ಟು 54 ಗ್ರಾಮಸ್ಥರು ಸಹಿ ಹಾಕಿದ್ದು, ಸೆಸ್ಕ್‌ನ ಕಿರಿಯ ಎಂಜಿನಿಯರ್ ಹಾಗೂ ಲೈನ್‌ಮೆನ್‌ಗಳ ಕರ್ತವ್ಯಲೋಪದಿಂದ ಗ್ರಾಮದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ವಿದ್ಯುತ್ ತಂತಿಗಳಿಗೆ ಅಡಚಣೆ ಆಗುವ ಮರದ ಕೊಂಬೆ, ರೆಂಬೆಗಳನ್ನು ಕತ್ತರಿಸದೆ ಜೋತು ಬಿದ್ದ ತಂತಿಗಳನ್ನು ಸರಿಪಡಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ವಿದ್ಯುತ್ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ, ಕಂಬದಿಂದ ತಂತಿ ತುಂಡಾದಾಗ, ರಸ್ತೆ ಬದಿಯ ಕಂಬಕ್ಕೆ ವಾಹನಗಳು ಡಿಕ್ಕಿಯಾದಾಗ ಮತ್ತು ತುರ್ತು ಸಂದರ್ಭಗಳಲ್ಲಿ ಇವರು ಗ್ರಾಮಸ್ಥರ ಕರೆಗಳನ್ನು ಸ್ವೀಕರಿಸುವುದಿಲ್ಲ. ಬೆಳಿಗ್ಗೆ 10 ಗಂಟೆಗೆ ವಿದ್ಯುತ್ ನೀಡಿ ಸಂಜೆ 6 ಗಂಟೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ವಿದ್ಯುತ್ ಇಲ್ಲದೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಓದಲು, ಬರೆಯಲು ಸಾಧ್ಯವಾಗದೆ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ಗ್ರಾಮದ ಸುನಂದಾ ಹಾಗೂ ದಿನೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮೂರ್ನಾಡು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಶಾಸಕ ಡಾ.ಮಂತರ್‌ಗೌಡ ಅವರಿಗೂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.