ADVERTISEMENT

ಕೊಡಗಿಗೆ ಪ್ರತಾಪಸಿಂಹ ಕೊಟ್ಟಿದ್ದೇನು?: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ಸಂಸದರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:22 IST
Last Updated 27 ಡಿಸೆಂಬರ್ 2022, 6:22 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮಡಿಕೇರಿ: ‘ಸಂಸದ ಪ್ರತಾಪಸಿಂಹ ಅವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿಲಾಡ್‌)ಯಡಿ ಅನ್ಯ ಲೋಕಸಭಾ ಕ್ಷೇತ್ರದ ಟ್ರಸ್ಟ್‌ಗೆ ಆಂಬುಲೆನ್ಸ್ ನೀಡಿದ್ದಾರೆ. ಆದರೆ, ಅವರನ್ನು ಗೆಲ್ಲಿಸಿದ ಕೊಡಗಿಗೆ ಎಷ್ಟು ಆಂಬುಲೆನ್ಸ್ ನೀಡಿದ್ದಾರೆ ಎನ್ನುವುದನ್ನು ಅವರು ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಒತ್ತಾಯಿಸಿದರು.

ಈ ಯೋಜನೆಯಡಿ ಅನ್ಯಕ್ಷೇತ್ರಕ್ಕೆ ಅನುದಾನ ನೀಡಲು ಅವಕಾಶ ಇದ್ದರೂ ಟ್ರಸ್ಟ್‌ಗೆ ನೀಡುವುದಕ್ಕೆ ಅವಕಾಶ ಇಲ್ಲ. ಆದರೆ, ಪ್ರತಾಪಸಿಂಹ ಬೆಳ್ತಂಗಡಿ ತಾಲ್ಲೂಕಿನ ಕಕ್ಕಿಂಜೆಯಲ್ಲಿ ‘ಬೇಂದ್ರಲಾ ವೆಂಕಟಕೃಷ್ಣ ಈರ್ವತ್ರಯ ಸ್ಮಾರಕ ಟ್ರಸ್ಟ್‌’ಗೆ ಆಂಬುಲೆನ್ಸ್‌ ನೀಡಿದ್ದಾರೆ. ಇದು ‘ಎಂಪಿಲಾಡ್‌’ ನಿಯಮಾವಳಿಯ ಉಲ್ಲಂಘನೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಈ ಮೂಲಕ ಅನುದಾನ ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿಗೆ ನ. 8ರಂದೇ ದೂರು ಸಲ್ಲಿಸಿ ದ್ದೇನೆ. ಇದುವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹೊರಜಿಲ್ಲೆಯ ಟ್ರಸ್ಟ್‌ಗೆ ಆಂಬುಲೆನ್ಸ್‌ ಕೊಡುವುದರ ಬದಲಿಗೆ ಕೊಡಗಿನ ಕಾಡಂಚಿನ ಆರೋಗ್ಯ ಕೇಂದ್ರಗಳಿಗೆ ಕೊಟ್ಟಿದ್ದರೆ ಇಲ್ಲಿನ ಜನರಿಗೆ ಅನುಕೂಲವಾಗುತ್ತಿತ್ತು. ಕೂಡಲೇ ಅವರು ಏಕೆ ತಮಗೆ ಮತ ಹಾಕಿದ ಕ್ಷೇತ್ರದ ಜನರಿಗೆ ಕೊಡದೇ ಹೊರ ಜಿಲ್ಲೆಗೆ ಆಂಬುಲೆನ್ಸ್‌ ನೀಡಿದರು ಎಂಬುದನ್ನು ಜನರಿಗೆ ಹೇಳಬೇಕು’ ಎಂದು ಒತ್ತಾಯಿಸಿದರು.

‘ಕುಲಪತಿಯಾಗಲು ₹ 5 ಕೋಟಿ, ₹ 6 ಕೋಟಿ ದುಡ್ಡು ತೆಗೆದುಕೊಂಡರೆ ಆತ ಏನಾಗುತ್ತಾನೆ? ಬೇರೆ ವ್ಯವಹಾರ ಮಾಡಲೇಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಗೆ ರಚಿಸುವ ಶೋಧನಾ ಸಮಿತಿ ಯಲ್ಲಿ ಹೆಸರು ತರುವುದಕ್ಕೂ ಲಾಬಿ ನಡೆಯುತ್ತಿದೆ’ ಎಂದು ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ವೊಂದರಲ್ಲಿ ಪ್ರತಾಪಸಿಂಹ ಹೇಳಿದ್ದರು. ಈ ಆಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯಿಸಬೇಕು’ ಎಂದು ಒತ್ತಾಯಿಸಿದರು.

‘ರೌಡಿಗಳನ್ನು ಬಿಜೆಪಿಗೆ ಸೇರಿಸಿಕೊ ಳ್ಳುವ ಮೂಲಕ ಮುಂಬರುವ ಚುನಾ ವಣೆಯಲ್ಲಿ ಬೆದರಿಸುವ ತಂತ್ರಗಾರಿಕೆಗೆ ಮೊರೆ ಹೋಗಿದೆ’ ಎಂದೂ ಆರೋಪಿಸಿ ದರು.

ಕಾಂಗ್ರೆಸ್ ಮುಖಂಡರಾದ ಜೀವಿಜಯ, ವೀಣಾ ಅಚ್ಚಯ್ಯ, ಸುರೇಶ್, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.