ADVERTISEMENT

ಬಜೆಟ್ ಪೂರ್ವಭಾವಿ ಸಭೆ: ಮತ್ತದೇ ಸಮಸ್ಯೆಗಳ ಪ್ರತಿಧ್ವನಿ, ಮತ್ತದೇ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 7:42 IST
Last Updated 29 ಫೆಬ್ರುವರಿ 2024, 7:42 IST
ಮಡಿಕೇರಿ ನಗರಸಭೆ ವತಿಯಿಂದ ಬುಧವಾರ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು
ಮಡಿಕೇರಿ ನಗರಸಭೆ ವತಿಯಿಂದ ಬುಧವಾರ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು   

ಮಡಿಕೇರಿ: ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಕರೆಯಲಾಗಿದ್ದ ಮಡಿಕೇರಿ ನಗರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಳೆದ ವರ್ಷ ಪ್ರಸ್ತಾಪಿತವಾಗಿದ್ದ ಸಮಸ್ಯೆಗಳೇ ಪ್ರಸ್ತಾವಗೊಂಡವು. ಬೆರಳೆಣಿಕೆಯಷ್ಟು ಸಾರ್ವಜನಿಕರು ಸಲಹೆಗಳನ್ನು ನೀಡಿದರು. ಕಳೆದ ವರ್ಷದಂತೆ ಈ ವರ್ಷವೂ ಸಲಹೆಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂಬ ಭರವಸೆ ಮಾತುಗಳು ಕೇಳಿ ಬಂದವು.

ಸುಮಾರು ಒಂದು ವಾರಕ್ಕೂ ಹಿಂದೆಯೇ ಸಭೆ ನಿಗದಿ ಮಾಡಿದ್ದರೂ ಸಭೆಗೆ ಸಾರ್ವಜನಿಕರಿಂದ ತೀರಾ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೂ ಸಲಹೆ ಕೊಡುವುದಕ್ಕಾದರೂ ಸಭೆಗೆ ಆಗಮಿಸಲಿಲ್ಲ. ಇದರಿಂದ ಸಭೆ ಬಣಗುಡುತ್ತಿತ್ತು.

ಬೈ.ಶ್ರೀ.ಪ್ರಕಾಶ್ ಅವರು ಮಾತನಾಡಿ, ‘ಮಡಿಕೇರಿಯಲ್ಲಿರುವ ಬಹುತೇಕ ಎಲ್ಲ ರಸ್ತೆಗಳೂ ಹದಗೆಟ್ಟಿವೆ. ನಗರೋತ್ಥಾನದಿಂದ ಬರುವ ಹಣವನ್ನು ಹಾಗೂ ಜನರ ತೆರಿಗೆಯನ್ನು ಹೇಗೆ ವ್ಯಯಿಸುತ್ತಿದ್ದೀರಿ ಎಂಬುದು ತಿಳಿಯುತ್ತಿಲ್ಲ. ಚರಂಡಿ ವ್ಯವಸ್ಥೆಯೂ ಸರಿ ಇಲ್ಲ. ವೈಜ್ಞಾನಿಕವಾದ ಅಭಿವೃದ್ಧಿ ಇಲ್ಲ. ಈ ಬಜೆಟ್‌ನಲ್ಲಿ ರಸ್ತೆ ಮತ್ತು ಚರಂಡಿಗೆ ವಿಶೇಷ ಆದ್ಯತೆ ನೀಡಿ’ ಎಂದು ಒತ್ತಾಯಿಸಿದರು.

ADVERTISEMENT

ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಸಾರ್ವಜನಿಕರ ಸಲಹೆಗಳನ್ನು ಪರಿಗಣಿಸಿ ಅತ್ಯುತ್ತಮವಾದ ಬಜೆಟ್ ಕೊಡಿ ಎಂದು ಹೇಳಿದರು.

ಅಂಬೆಕಲ್ ನವೀನ್ ಮಾತನಾಡಿ, ‘ಬೀದಿನಾಯಿಗಳ ಹಾವಳಿ ನಗರದಲ್ಲಿ ಮಿತಿ ಮೀರಿದೆ. ಇತ್ತೀಚೆಗೆ ಬೆಳಿಗ್ಗೆ ಹೊತ್ತು ವಾಯುವಿಹಾರಕ್ಕೆ ಹೋಗುವುದಕ್ಕೂ ಆಗುತ್ತಿಲ್ಲ. ಇವುಗಳನ್ನು ನಿಯಂತ್ರಿಸಲು ಬಜೆಟ್‌ನಲ್ಲಿ ವಿಶೇಷ ಯೋಜನೆ ಕೊಡಿ’ ಎಂದು ಮನವಿ ಮಾಡಿದರು. ಜೊತೆಗೆ, ವಾಹನ ನಿಲುಗಡೆ ಸಮಸ್ಯೆ ನಿವಾರಿಸಲು ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು

ಸಂತೋಷ್ ಮಾತನಾಡಿ, ‘ಕಳೆದ ಬಜೆಟ್‌ ಸಭೆಯಲ್ಲೂ ಕಾಲೇಜು ರಸ್ತೆಯಲ್ಲಿ ಶೌಚಾಲಯ ನಿರ್ಮಿಸಿ ಎಂದು ಮನವಿ ಮಾಡಿದ್ದೆವು  ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಈ ಬಾರಿ ಬಜೆಟ್‌ನಲ್ಲಿ ಅಳವಡಿಸಿ’ ಎಂದರು. ರವಿಗೌಡ, ಜಗದೀಶ್, ಸಂತೋಷ್ ಅಣ್ವೇಕರ್, ಮುನೀರ್ ಮಾಚಾರ್ ಸೇರಿದಂತೆ ಕೆಲವರು ಸಲಹೆಗಳನ್ನು ನೀಡಿದರು.

ನಂತರ, ಕೆಲವರು ನಗರದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು. ಇದು ಕೇವಲ ಬಜೆಟ್‌ ಪೂರ್ವಭಾವಿ ಸಭೆಯಾಗಿದ್ದು, ಸಭೆ ಕುರಿತು ಸಲಹೆಗಳನ್ನು ನೀಡುವಂತೆ ಮನವಿ ಮಾಡಿದ ಕಮಿಷನರ್ ವಿಜಯ್ ನಂತರ ಸಭೆಯಿಂದ ನಿರ್ಗಮಿಸಿದರು.

ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಶ್ವೇತಾ ಪ್ರಶಾಂತ್, ಸಬಿತಾ, ಚಿತ್ರಾವತಿ, ಚಂದ್ರಶೇಖರ್, ನಗರಸಭೆಯ ಎಂಜಿನಿಯರ್‌ಗಳಾದ ಸೌಮ್ಯಾ, ತಾಹೀರ್ ಭಾಗವಹಿಸಿದ್ದರು.

ಮಡಿಕೇರಿ ನಗರಸಭೆ ವತಿಯಿಂದ ಬುಧವಾರ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.