ಸೋಮವಾರಪೇಟೆ: ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆಯುವ ವಾರ್ಷಿಕ ಸುಗ್ಗಿ, ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ (ಲಕ್ಷ್ಮೀ)ಉತ್ಸವ ಎಂದೇ ಹೆಸರಾಗಿರುವ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ಪ್ರಾರಂಭಗೊಂಡಿದ್ದು, ಏ. 21ರಂದು ಹಗಲು ಸುಗ್ಗಿ ನಡೆಯಲಿದೆ.
ಈ ಭಾಗದಲ್ಲಿ ಕೂತಿನಾಡೆಂದು ಪ್ರಸಿದ್ಧಿಯಾಗಿರುವ ಕೂತಿ ಗ್ರಾಮ ಸಬ್ಬಮ್ಮ ದೇವರ ತವರು ಎಂಬ ಪ್ರತೀತಿ ಇದೆ. ಈ ಸುಗ್ಗಿ ಉತ್ಸವದಲ್ಲಿ ಕೂತಿ, ಯಡದಂಟೆ, ನಗರಳ್ಳಿ, ಕುಂದಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಹಳ್ಳಿಯೂರು, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಜಕ್ಕನಳ್ಳಿ, ಇನಕನಳ್ಳಿ, ಕೊತ್ತನಳ್ಳಿ, ಕುಡಿಗಾಣ, ಬೆಂಕಳ್ಳಿ, ನಾಡ್ನಳ್ಳಿ, ತಡಕೊಪ್ಪ ಹಾಗೂ ಗಡಿಯ ಸಕಲೇಶಪುರದ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ಆಚರಿಸುವುದನ್ನು ಇಲ್ಲಿ ಕಾಣಬಹುದು.
ಉತ್ಸವದ ಕೊನೆ ದಿನ ಸೋಮವಾರ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜನಪದೀಯ ಆಚರಣೆಯಂತು ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ತೋರಿಸುತ್ತದೆ.
ಈಗಾಗಲೇ ಏ. 12ರಿಂದ ಬೈನೆಬನದಲ್ಲಿ ಸುಗ್ಗಿ ಉತ್ಸವ ಪ್ರಾರಂಭಗೊಂಡಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಎಲ್ಲ ಗ್ರಾಮಗಳಲ್ಲೂ ಸುಗ್ಗಿ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬರುವುದು ಇಲ್ಲಿನ ಸಂಪ್ರದಾಯ.
‘ನೂರಾರು ವರ್ಷಗಳ ಇತಿಹಾಸ ಇರುವ ಈ ಸುಗ್ಗಿಯನ್ನು ರಾಜಮಹರಾಜರು ನಡೆಸಿಕೊಂಡು ಬರುತ್ತಿದ್ದರು. ಅದನ್ನು ಈಗ ನಾವು ಮುಂದುವರೆಸುತ್ತಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಸುಗ್ಗಿಯ ಪ್ರಮುಖ ದೇವರಾದ ಸಬ್ಬಮ್ಮ ಎಲ್ಲ ಗ್ರಾಮಗಳ ಮನೆದೇವರಾಗಿಯೂ ಇರುವುದರಿಂದ, ಎಲ್ಲರೂ ತಮ್ಮ ಕುಟುಂಬಸ್ಥರೊಂದಿಗೆ ಸುಗ್ಗಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಏ. 21ರಂದು ನಗರಳ್ಳಿ ಸುಗ್ಗಿ ಬನದಲ್ಲಿ ಹಗಲು ಸುಗ್ಗಿ ನಡೆಸಲಾಗುವುದು. 16ರಂದು ರಂಗ ಬನ ಮಾಡುವುದು, ದರಗು ಮಡೆಯನ್ನು ಮೇಲಾಕೇರಿಯವರು ಮಾಡುವುದು. 17ರಂದು ನೀತಿ ಬೆಟ್ಟಕ್ಕೆ ತೆರಳಿ ದೇವರನ್ನು ಅರ್ಚಕರು ಹಾಗೂ ಪಟ್ಟದವರು ಕರೆತರುವರು. ಆಯಾ ಗ್ರಾಮಗಳಲ್ಲಿ ಹೊಂಡದ ಸುಗ್ಗಿ ನಡೆಯುವುದು, 18ರಂದು ದೊಡ್ಡಹಬ್ಬದ ಸಾರು, 19ರಂದು ದೊಡ್ಡಹಬ್ಬ, ಬೆಳಿಗ್ಗೆ ಮಲ್ಲು ಸುಗ್ಗಿ, ಅರ್ಚಕರು ಸೇರಿ ಬಿಲ್ಲೇರಂಗದಲ್ಲಿ ಮಲ್ಲು ಬೆಳಗುವುದು, ಆಯಾ ಗ್ರಾಮಗಳಲ್ಲಿ ಸೊಡ್ಲುಪ್ರಜೆ ಮತ್ತು ಸುಗ್ಗಿ ಆಡುವುದು, 20ರಂದು ದೊಡ್ಡ ಮೀಸಲು, 21ರಂದು ಹಗಲು ಸುಗ್ಗಿ, 22ರಂದು ಊಲು ಇಳಿಸುವುದು, ದೇವರ ಅರ್ಚಕರ ಸಲಿಗೆ ಒಪ್ಪಿಸುವುದು, 26ರಂದು ಹೊಸಳಹಬ್ಬದ ಸಾರು, 27ರಂದು ಹೊಸಳಹಬ್ಬದ ಮಡೆ ನಾಡತಿ ಬನದಲ್ಲಿ ನಡೆಯುವುದು ಎಂದು ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಬಿ.ಜಗದೀಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.