ADVERTISEMENT

ಆಲೂರು–ಸಿದ್ದಾಪುರ ಸರ್ಕಾರಿ ಶಾಲೆ ವಜ್ರಮಹೋತ್ಸವ: ₹20 ಲಕ್ಷದ ಅಂದಾಜು ಕ್ರಿಯಾಯೋಜನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:58 IST
Last Updated 3 ಆಗಸ್ಟ್ 2025, 4:58 IST
ಶನಿವಾರಸಂತೆ ಸಮೀಪದ ಆಲೂರು–ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಚರಿಸಲಿರುವ ಶಾಲಾ ವಜ್ರಮಹೋತ್ಸವ ಕಾರ್ಯಕ್ರಮದ 5ನೇ ಪೂರ್ವಭಾವಿ ಸಭೆಯು ಈಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು
ಶನಿವಾರಸಂತೆ ಸಮೀಪದ ಆಲೂರು–ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಚರಿಸಲಿರುವ ಶಾಲಾ ವಜ್ರಮಹೋತ್ಸವ ಕಾರ್ಯಕ್ರಮದ 5ನೇ ಪೂರ್ವಭಾವಿ ಸಭೆಯು ಈಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು   

ಶನಿವಾರಸಂತೆ: ಇಲ್ಲಿಗೆ ಸಮೀಪದ ಆಲೂರು–ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 75 ವರ್ಷ ಪೂರೈಸಿರುವುದರಿಂದ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಚರಿಸಲಿರುವ ಶಾಲಾ ವಜ್ರಮಹೋತ್ಸವ ಕಾರ್ಯಕ್ರಮದ 5ನೇ ಪೂರ್ವಭಾವಿ ಸಭೆಯು ಈಚೆಗೆ ಶಾಲಾ ಸಭಾಂಗಣದಲ್ಲಿ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್.ಸತೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪೂರ್ವಭಾವಿ ಸಭೆಯ ಪ್ರಾರಂಭದಲ್ಲಿ ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಎಚ್.ಪಿ.ಕರುಂಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈಗಾಗಲೇ ನಡೆದ ಪೂರ್ವಭಾವಿ ಸಭೆಗಳಲ್ಲಿ ಶಾಲಾ ವಜ್ರಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಗಿತ್ತು. ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು ₹ 20 ಲಕ್ಷ ವೆಚ್ಚ ಆಗಲಿರುವ ಕುರಿತು ಅಂದಾಜು ಕ್ರಿಯಾಯೋಜನೆ ರೂಪಿಸಲಾಗಿತ್ತು. ಈ ನಿಟ್ಟಿನಲ್ಲಿ ಹಣದ ಕ್ರೋಢೀಕರಣ ಅಗತ್ಯ ಇರುವುದರಿಂದ ವಜ್ರಮಹೋತ್ಸವ ಸಮಿತಿ, ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳನ್ನು ಹಣ ಕ್ರೋಢೀಕರಣಕ್ಕೆ ಸಹಕಾರ ಕೋರಬೇಕಿದೆ. ಈ ಮೂಲಕವಾಗಿ ಎಲ್ಲರೂ ವಜ್ರಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ ನವಂಬರ್ ತಿಂಗಳ ಕೊನೆಯಲ್ಲಿ ಆಚರಿಸಲಿರುವುದರಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಆರ್ಥಿಕ ಕ್ರೋಢಿಕರಣದ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವ ಬಗ್ಗೆ ತೀರ್ಮಾನ ಮಾಡಲಾಯಿತು.

ADVERTISEMENT

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಪಾಠ ಮಾಡಿದ ಗುರುಗಳಿಗೆ ಗುರುವಂದನೆ, ಮಾಜಿ ಸೈನಿಕರು, ಸಾಧಕರಿಗೆ ಸನ್ಮಾನದ ಜೊತೆಯಲ್ಲಿ ಹಳೆಯ ವಿದ್ಯಾರ್ಥಿಗಳಾಗಿದ್ದು, ಈಗ ಪ್ರಗತಿಪರ ರೈತರಾಗಿರುವರನ್ನು ಗುರುತಿಸಿ ಸಾಧಕ ರೈತರನ್ನೂ, ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವಂತೆ ನಿರ್ಣಯಿಸಲಾಯಿತು.

ವಜ್ರಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಶಾಲಾ ಕೊಠಡಿಗಳನ್ನು ದುರಸ್ಥಿಪಡಿಸುವ ಅಗತ್ಯ ಇರುವುದರಿಂದ ಈ ಕುರಿತು ಶಾಸಕರಿಗೆ ಮನವಿ ನೀಡಲಾಗಿದ್ದು, ಈ ಬಗ್ಗೆ ಶಾಸಕರಿಂದ ಆರ್ಥಿಕ ನೆರವಿನ ಭರವಸೆ ನೀಡಿರುವ ಬಗ್ಗೆ ಸಮಿತಿ ಸದಸ್ಯರು ಸಭೆಗೆ ಸ್ಪಷ್ಟಪಡಿಸಿದರು. ಮುಂದಿನ ಪೂರ್ವಭಾವಿ ಸಭೆ ಆಗಸ್ಟ್ 29ರಂದು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಕಡ್ಯದ ಮಾಚಯ್ಯ, ಹೊಸಕ್ಲು ಕೃಷ್ಣಪ್ಪ, ಎಚ್.ಎಸ್.ಪ್ರೇಮ್‍ನಾಥ್, ಗಣಪತಿ, ಎಸ್‍ಡಿಎಂಸಿ ಅಧ್ಯಕ್ಷ ಹೇಮಾನಂದ್, ಬೈಮನ ಪ್ರಕಾಶ್ ವೀಣಾ, ಶಾಲಾ ಮುಖ್ಯ ಶಿಕ್ಷಕ ಉದಯ್‍ಕುಮಾರ್, ನಿವೃತ್ತ ಅಭಿಯಂತರ ಮತ್ತು ದಾನಿ ಸೋಮೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.