ADVERTISEMENT

ಪ್ರಾಸ್ಟೇಟ್, ಮೂತ್ರಪಿಂಡ ಸಮಸ್ಯೆ ಹೆಚ್ಚಳ: ಬೇಡ ಭೀತಿ, ಇರಲಿ ಎಚ್ಚರ- ವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:58 IST
Last Updated 23 ಜನವರಿ 2026, 4:58 IST
   

ಮಡಿಕೇರಿ: ‘ಪುರುಷರಲ್ಲಿ ಪ್ರಾಸ್ಟೇಟ್ ಮತ್ತು ಮೂತ್ರಪಿಂಡ ಸಮಸ್ಯೆ ಹೆಚ್ಚುತ್ತಿದ್ದು, ಈ ಕುರಿತು ಹೆಚ್ಚಿನ ಜಾಗ್ರತೆ ವಹಿಸಬೇಕು’ ಎಂದು ಮಣಿಪಾಲ ಆಸ್ಪ‍ತ್ರೆಯ ತಜ್ಞ ವೈದ್ಯರಾದ ಡಾ.ಕೆ.ಎ.ತಿಮ್ಮಯ್ಯ ಹಾಗೂ ಡಾ.ಪಿ.ಟಿ.ವಿಪಿನ್ ಕಾವೇರಪ್ಪ ಇಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಾ.ಕೆ.ಎ.ತಿಮ್ಮಯ್ಯ ಮಾತನಾಡಿ, ‘50 ವರ್ಷ ತುಂಬಿದ ಪುರುಷರಲ್ಲಿ ಪ್ರೊಸ್ಟೇಟ್ ಗ್ರಂಥಿ ದೊಡ್ಡದಾಗುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಪುರುಷರು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಅಥವಾ ರಾತ್ರಿ ವೇಳೆ ಅತಿಯಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ವಯಸ್ಸಾದ ಮೇಲೆ ಇದೆಲ್ಲಾ ಸಾಮಾನ್ಯ ಎಂದು ನಿರ್ಲಕ್ಷಿಸುತ್ತಾರೆ. ಇದರಿಂದ ಕಾಯಿಲೆಯನ್ನು ಪತ್ತೆ ಹಚ್ಚುವುದು ತಡವಾಗುತ್ತದೆ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಯಸ್ಸು, ಕೌಟುಂಬಿಕ ಹಿನ್ನೆಲೆ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ. 45 ವರ್ಷ ತುಂಬಿದವರು ಮತ್ತು ಕುಟುಂಬದಲ್ಲಿ ಇಂತಹ ಕಾಯಿಲೆಯ ಹಿನ್ನೆಲೆ ಇರುವವರು ತಪ್ಪದೆ  ಪಿಎಸ್‌ಎ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣಪಡಿಸುವುದು ಸುಲಭ’ ಎಂದರು.

ADVERTISEMENT

ಮೂತ್ರಪಿಂಡದ ಆರೋಗ್ಯದ ಕುರಿತು ಮಾತನಾಡಿದ, ‘ಡಾ.ವಿಪಿನ್ ಕಾವೇರಪ್ಪ, ‘ಮಧುಮೇಹ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಮೂತ್ರಪಿಂಡಗಳ ಹಾನಿಗೆ ಪ್ರಮುಖ ಕಾರಣವಾಗುತ್ತಿವೆ. ಇಂತಹ ಸಮಸ್ಯೆಗಳು ಯಾವುದೇ ಲಕ್ಷಣವಿಲ್ಲದೆ ಮೂತ್ರಪಿಂಡದ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಬಹುದು. ಹಾಗಾಗಿ, 40 ವರ್ಷ ದಾಟಿದ ಪುರುಷರು ಮತ್ತು ರೋಗದ ಲಕ್ಷಣವಿರುವವರು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಕಿಡ್ನಿ ಕಾರ್ಯನಿರ್ವಹಣೆಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕಡಿಮೆ ಉಪ್ಪು ತಿನ್ನುವುದು, ಹೆಚ್ಚು ನೀರು ಕುಡಿಯುವುದು, ನೋವು ನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಬಳಸುವುದನ್ನು ನಿಲ್ಲಿಸುವುದು ಮತ್ತು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮೂತ್ರಪಿಂಡವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.