ಸುಂಟಿಕೊಪ್ಪ: ಸಮೀಪದ ಐಗೂರು ವ್ಯಾಪ್ತಿಯ ಬೆಳೆಗಾರರಿಗೆ ಆನೆ, ಕಾಡುಕೋಣ, ಮಂಗಗಳಿಂದ ನಿರಂತರ ಉಪಟಳ ಒಂದೆಡೆಯಾದರೆ, ಮತ್ತೊಂದೆಡೆ ಕಾಡು ದನಗಳ ಹಾವಳಿಯಿಂದ ಕೃಷಿಕರು ಹೈರಾಣಾಗಿದ್ದಾರೆ.
ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ರಾತ್ರಿ ವೇಳೆ 11 ಗಂಟೆಗೆ ಐಗೂರು ಗ್ರಾಮದ ಎಂ.ಸಿ.ಗಣೇಶ, ಎಂ.ಸಿ.ಸಂಜಯ್, ರಾಣಿ ದೇವರಾಜು, ಎಂ.ಎಂ.ಲಿಂಗರಾಜು ಹಾಗೂ ಪುಚ್ಚಿಯಂಡ ಕುಟುಂಬಸ್ಥರ ಕಾಫಿ ತೋಟಕ್ಕೆ 100ಕ್ಕೂ ಅಧಿಕ ಕಾಡುಗೂಳಿ, ದನ, ಕರುಗಳು ಲಗ್ಗೆಯಿಟ್ಟು ಕಾಫಿ ಗಿಡದ ರೆಕ್ಕೆಗಳನ್ನು ಮುರಿದು ಹೊಸದಾಗಿ ನೆಟ್ಟ ಕಾಫಿ ಗಿಡ, ಕರಿಮೆಣಸು ಗಿಡಗಳನ್ನು ನಾಶಪಡಿಸುತ್ತಿವೆ.
ಬಾಳೆಗಿಡ ಹಾಗೂ ತೋಟದಲ್ಲಿ ಸಿಕ್ಕ ಸಣ್ಣ ಅಡಕೆ, ತೆಂಗು ಗಿಡವನ್ನು ತಿಂದು ಮೆಟ್ಟಿ ನಾಶಪಡಿಸುತ್ತಿದ್ದು, ಫಸಲು ಬಿಡುವ ಸಮಯದಲ್ಲಿ ಕಾಯಿಗಳು ನೆಲಕ್ಕೆ ಉದುರಿ ಬೀಳುತ್ತಿವೆ. ಗ್ರಾಮ ಪಂಚಾಯಿತಿಗೆ ಕಾಡು ದನಗಳ ಉಪಟಳದ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ 11 ಗಂಟೆಗೆ ತೋಟಕ್ಕೆ ನುಗ್ಗುವ ಕಾಡುದನಗಳು ಬೆಳಿಗ್ಗೆ 3 ಗಂಟೆಗೆ ಅಲ್ಲಿಂದ ಕಾಲ್ಕಿತ್ತು ಅರಣ್ಯ ಪ್ರದೇಶಕ್ಕೆ ಸೇರಿಕೊಳ್ಳುತ್ತಿವೆ. ಈ ಸಂಬಂಧ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು’ ಎಂದು ಎಂ.ಸಿ.ಗಣೇಶ ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.