ಮಡಿಕೇರಿ: ‘ಲೈನ್‌ಮನೆ ನಿವಾಸಿಗಳಿಗೆ ಸ್ವಂತ ಸೂರು, ಜಾಗ ನೀಡಬೇಕು. ಶ್ರೀಮಂತರಿಗೆ ಜಮೀನು ಗುತ್ತಿಗೆಗೆ ನೀಡುವುದು ಬೇಡ, ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮುಂತಾದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ’ ಸಿಪಿಐಎಂಎಲ್ ಮಾಸ್ ಲೈನ್ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಾವಿರಾರು ಮಂದಿ ಸೂರು, ಸ್ವಂತ ಜಮೀನು ಇಲ್ಲದೆ ದಯನೀಯ ಸ್ಥಿತಿಯಲ್ಲಿರುವಾಗ ಭೂಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಮತ್ತೆ ಅವರಿಗೆ 25 ಎಕರೆವರೆಗೆ 30 ವರ್ಷಗಳಿಗೆ ಗುತ್ತಿಗೆಗೆ ನೀಡುವ ಸರ್ಕಾರದ ಕ್ರಮ ಯಾವ ನ್ಯಾಯ ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ, ‘ಲೈನ್‌ಮನೆಯಿಂದ ಬಿಡುಗಡೆಗೊಳಿಸಿ ಜಿಲ್ಲೆಯ ಎಲ್ಲ ಆದಿವಾಸಿ, ದಲಿತರಿಗೆ ಸ್ವಂತ ಸೂರು ಮತ್ತು ಭೂಮಿ ನೀಡಬೇಕು’ ಎಂದು ಆಗ್ರಹಿಸಿದರು.
ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಸಿರುವ 50, 53, 57 ಹಾಗೂ 94 ಸಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಉಳ್ಳವರಿಗೆ ಭೂಮಿಯನ್ನು ಗುತ್ತಿಗೆ ನೀಡುವುದನ್ನು ರದ್ದುಗೊಳಿಸಬೇಕು, ಉಳ್ಳವರ ಅಕ್ರಮ ಭೂಮಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಬಡವರಿಗೆ, ದಲಿತರಿಗೆ ಹಾಗೂ ಆದಿವಾಸಿಗಳಿಗೆ ಭೂಮಿಯನ್ನು ಕೂಡಲೇ ಮೀಸಲಿರಿಸಬೇಕು ಎಂದು ಮನವಿ ಮಾಡಿದರು.
ಆದಿವಾಸಿ ಅರಣ್ಯ ಹಕ್ಕು ಕಾಯ್ದೆ, ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಹಾಗೂ ಸಮುದಾಯ ಅರಣ್ಯ ಹಕ್ಕು ಕಾಯ್ದೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನಿರುದ್ಯೋಗಿ ಯುವಕ, ಯುವತಿಯರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಅಭಿವೃದ್ಧಿ ನಿಗಮದ ಅಡಿಯಲ್ಲಿ ಹೆಚ್ಚಿನ ಸಾಲಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಆದಿವಾಸಿ ಪುನರ್ವಸತಿ ಕೇಂದ್ರ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅಪೂರ್ಣ ಕಾಮಗಾರಿಗಳ ಕುರಿತು ತನಿಖೆಗೆ ಒಳಪಡಿಸಬೇಕು ಎಂದೂ ಅವರು ಮನವಿ ಮಾಡಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಜೆ.ಎಂ.ಸುರೇಶ್, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ಹೋರಾಟಗಾರರಾದ ಎಚ್.ಜೆ.ಪ್ರಕಾಶ್, ವೈ.ಎಂ.ಮೋಹನ್, ರಾಧಾ, ನವೀನಾಕ್ಷಿ, ಬಾಬು, ಮುತ್ತ, ಅಣ್ಣಪ್ಪ, ಜೆ.ಬಿ.ರಘು, ದಾಸಪ್ಪ, ಮಧು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.