ಕುಶಾಲನಗರ ವಿದ್ಯಾರ್ಥಿನಿ ತೇಜಸ್ವಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದಿದ್ದು, ತಾಯಿ ಸುಜಾತಾ ಸಿಹಿ ತಿನ್ನಿಸಿದರು
ಕುಶಾಲನಗರ: ಸಮೀಪದ ಕೊಪ್ಪ ಭಾರತ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ
ಪಡೆದಿದ್ದಾರೆ.
ಇಲ್ಲಿನ ಆದಿಶಂಕರಾಚಾರ್ಯ ಬಡಾವಣೆಯ ನಿವಾಸಿ ಅರಣ್ಯ ಇಲಾಖೆಯ ಅಧಿಕಾರಿ ಎಂ.ಎ. ಆನಂದ ಮತ್ತು ಸುಜಾತಾ ದಂಪತಿಯ ಪುತ್ರಿಯಾಗಿದ್ದು, ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಹಾಗೂ ಕುಶಾಲನಗರ ಪಟ್ಟಣಕ್ಕೆ ಹೆಸರು ತಂದಿದ್ದಾಳೆ.
‘ತೇಜಸ್ವಿನಿಗೆ ಸಿಎ ಮಾಡುವಾಸೆ’
‘ನಾನು ರ್‍ಯಾಂಕ್ ಪಡೆಯಲು ತನ್ನ ಕಲಿಕೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ತನ್ನ ತಂದೆ - ತಾಯಿಯವರ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕಾರಣವಾಗಿದೆ.
ನಾನು ಮೊದಲಿನಿಂದಲೂ ಪ್ರತಿನಿತ್ಯ ಐದಾರು ಗಂಟೆಗಳ ಕಾಲ ಪರಿಶ್ರಮಪಟ್ಟು ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷಾಪೂರ್ವದಲ್ಲಿ ದಿನಕ್ಕೆ 8-10 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಕಷ್ಟಪಟ್ಟು ಉತ್ತಮ ಅಭ್ಯಾಸ ಮಾಡಿದರೆ ಉತ್ತಮ ಅಂಕಗಳು ದೊರಕಿ ಯಶಸ್ಸು ಲಭಿಸುತ್ತದೆ ಎಂಬ ವಿಶ್ವಾಸವಿತ್ತು’ ಎಂದು ವಿದ್ಯಾರ್ಥಿನಿ ತೇಜಸ್ವಿನಿ ಅಭಿಪ್ರಾಯ ವ್ಯಕ್ತಪಡಿಸಿದರು.
‘ನಾನು ಮುಂದೆ ಸಿ.ಎ. ಕೋರ್ಸ್ ಅಭ್ಯಾಸ ಮಾಡುವ ಉದ್ದೇಶ ಹೊಂದಿದ್ದು, ನಮ್ಮ ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತು ದೇಶದ ಆರ್ಥಿಕಮಟ್ಟ ಸುಧಾರಿಸುವ ದಿಸೆಯಲ್ಲಿ ನಾನು ಪ್ರಯತ್ನಿಸುತ್ತೇನೆ’ ಎಂದು ತೇಜಸ್ವಿನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.