ADVERTISEMENT

ಸುಗ್ಗಿ ಸಂಭ್ರಮಕ್ಕೆ ಅಣಿಯಾಗುತ್ತಿದೆ ಜಿಲ್ಲೆ ಕೊಡಗು

ಡಿ. 4ರಂದು ಜಿಲ್ಲೆಯಾದ್ಯಂತ ನಡೆಯಲಿದೆ ಪುತ್ತರಿ (ಹುತ್ತರಿ) ಹಬ್ಬ

ಸಿ.ಎಸ್.ಸುರೇಶ್
Published 1 ಡಿಸೆಂಬರ್ 2025, 6:44 IST
Last Updated 1 ಡಿಸೆಂಬರ್ 2025, 6:44 IST
ಪುತ್ತರಿ ಹಬ್ಬದಂದು ಗದ್ದೆಗಳಲ್ಲಿ ಬತ್ತದ ಕದಿರು ಕತ್ತರಿಸುವ ಸಾಂಪ್ರದಾಯಿಕ ಆಚರಣೆ (ಸಂಗ್ರಹ ಚಿತ್ರ)
ಪುತ್ತರಿ ಹಬ್ಬದಂದು ಗದ್ದೆಗಳಲ್ಲಿ ಬತ್ತದ ಕದಿರು ಕತ್ತರಿಸುವ ಸಾಂಪ್ರದಾಯಿಕ ಆಚರಣೆ (ಸಂಗ್ರಹ ಚಿತ್ರ)   

ನಾಪೋಕ್ಲು: ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವ ಮಹತ್ವದ ಹಬ್ಬ ಪುತ್ತರಿ (ಹುತ್ತರಿ). ರಾಜ್ಯದ ಬೇರೆಲ್ಲೂ  ಭಾಗದಲ್ಲೂ ಕಾಣಸಿಗದಂತಹ ವಿಶಿಷ್ಟತೆ ಹೊಂದಿರುವ ಇದು ಕಾವೇರಿ ತವರಿನ ಸಿರಿ ಹಬ್ಬ. ಡಿ. 4ರಂದು ಹುಣ್ಣಿಮೆಯ ದಿನ ಈ ಹಬ್ಬಕ್ಕೆ ದಿನಾಂಕ ನಿಗದಿಯಾಗಿದ್ದು, ಎಲ್ಲೆಡೆ ಸಂಭ್ರಮ ವ್ಯಾಪಿಸುತ್ತಿದೆ.

ಪುತ್ತರಿ, ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬ. ಕೊಡವ ನುಡಿಯ ಪುತ್ತರಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ. ವ್ಯವಸಾಯವನ್ನೇ ನೆಚ್ಚಿ ಬದುಕುವ ಬಹುತೇಕ ರೈತಾಪಿ ವರ್ಗ ಪೈರುಗಳು ಬೆಳೆದಾಗ ನಿರ್ದಿಷ್ಟ ಕಾಲದಲ್ಲಿ ಶಾಸ್ತ್ರೋಕ್ತವಾಗಿ ಕತ್ತರಿಸಿ ತಂದು ಮನೆಯನ್ನು ತುಂಬಿಸಿಕೊಳ್ಳುವುದೇ ಈ ಪುತ್ತರಿ ಹಬ್ಬದ ವೈಶಿಷ್ಟ್ಯ. ಹಬ್ಬದ ದಿನಾಂಕವನ್ನು ಕೊಡಗಿನ ಪ್ರಮುಖ ದೇವಾಲಯವಾದ ಕಕ್ಕಬ್ಬೆಯ ಇಗ್ಗುತಪ್ಪ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಯಿಸುತ್ತಾರೆ.

ಹಬ್ಬದಂದು ಪುತ್ತರಿಯ ಸಾಂಪ್ರದಾಯಿಕ ಆಚರಣೆಗಳು ಆರಂಭಗೊಳ್ಳುವುದು ನೆಲ್ಲಕ್ಕಿ ಬಾಡೆಯಿಂದ. (ಇದು ನಡುಕೋಣೆ) ಸಾಂಪ್ರದಾಯಿಕ ಉಡುಪು ಧರಿಸಿ ಕುಪ್ಪುಸ ತೊಟ್ಟು ಸೊಂಟಕ್ಕೆ ನಡು ಪಟ್ಟಿ ಬಿಗಿದು ಅದರಲ್ಲಿ ಪೀಚೆ ಕತ್ತಿಯನ್ನು ಸಿಕ್ಕಿಸಿ ಮನೆಯೊಡೆಯ ನೆಲ್ಲಕ್ಕಿ ಬಾಡೆಯಲ್ಲಿ ಬೆಳಗುತ್ತಿರುವ ತೂಗುದೀಪದ ಮುಂದೆ ಕೈಜೋಡಿಸಿ ಕುಲದೇವರನ್ನು ಪ್ರಾರ್ಥಿಸುತ್ತಾರೆ.‘

ADVERTISEMENT

‘ಪುತ್ತರಿ ಹಬ್ಬದ ಈ ಸುಸಂದರ್ಭದಲ್ಲಿ ಕದಿರು ತೆಗೆಯಲು ಹೋಗುವಲ್ಲಿ ಪುತ್ತರಿ ಕತ್ತಿಯನ್ನು ತೆಗೆದು ತರುವಲ್ಲಿ ಯಾವ ಅಡ್ಡಿ ಆತಂಕಗಳಾಗದಂತೆ ನಡೆಸಿಕೊಡುವ ಜವಾಬ್ದಾರಿ ಇಗ್ಗುತ್ತಪ್ಪನಿಗೆ ಸೇರಿದ್ದು’. ಈ ಪ್ರಾರ್ಥನೆಯ ಬಳಿಕ ಮನೆ ಮಂದಿಯೆಲ್ಲಾ ಒಟ್ಟುಗೂಡಿ ಭತ್ತದ ಗದ್ದೆಗೆ ತೆರಳುವರು. ಫ್ರಥಮ ಕೊಯ್ಲಿಗೆಂದು ನಿರ್ದಿಷ್ಟಪಡಿಸಿದ ಗದ್ದೆಯಲ್ಲಿ ಕುಟುಂಬದ ಹಿರಿಯ ಭತ್ತದ ಪೈರುಗಳನ್ನು ಪೂಜಿಸಿ ಅದಕ್ಕೆ ಹಣ್ಣು, ಕಾಯಿ, ಹಾಲು, ಜೇನುಗಳನ್ನು ಸಮರ್ಪಿಸಿ ಬಳಿಕ ‘ಪೊಲಿ ಪೊಲಿಯೇ ದೇವಾ’ ಎಂದು ಏರುದನಿಯಲ್ಲಿ ಕೂಗುತ್ತಾ ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯನ್ನು ತುಂಬಿಕೊಳ್ಳುವ ವಿಧಿವತ್ತಾದ ಆಚರಣೆ ಪುತ್ತರಿ ಹಬ್ಬದಲ್ಲಿ ಪ್ರಮುಖ ಅಂಶ.

ಪುತ್ತರಿಯಂದು ಅಡುಗೆ ವೈವಿಧ್ಯಮಯವಾಗಿದ್ದು ವಿಶಿಷ್ಟವೂ ಹೌದು. ಬಾಳೇಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’, ಘಮಘಮಿಸುವ ಏಲಕ್ಕಿ ಪುಟ್, ಆಗತಾನೆ ಗದ್ದೆಯಿಂದ ಕುಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿಗೆ ಐದಾರು ಪುಟ್ಟ ಕಲ್ಲು ಚೂರುಗಳನ್ನು ಸೇರಿಸಿ ಪಾಯಸ ಮಾಡುತ್ತಾರೆ. ಊಟ ಮಾಡುವಾಗ ಕಲ್ಲು ಸಿಕ್ಕಿದವರಿಗೆ ಕಲ್ಲಾಯುಷ್ಯ(ಅಂದರೆ ಧೀರ್ಘಾಯುಷ್ಯ) ಎಂಬುದಾಗಿ ಹಿರಿಯರ ಆಶೀರ್ವಾದ ಲಭಿಸುತ್ತದೆ. ಪುತ್ತರಿಯಲ್ಲಷ್ಟೇ ಈ ವಿಶೇಷ ಕಾರ್ಯಕ್ರಮ ಕಾಣಬಹುದು. 

ಪುತ್ತರಿ ಹಬ್ಬ ಕಳೆದ ಮೂರುದಿನಗಳಲ್ಲಿ ಊರ ಮಂದ್‌ಗಳಲ್ಲಿ ಪುತ್ತರಿ ಕೋಲಾಟ ವಿಜೃಂಭಣೆಯಿಂದ ನಡೆಯುವುದು (ಸಂಗ್ರಹ ಚಿತ್ರ)
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ದಿನವನ್ನು ಈಚೆಗೆ ನಿಗದಿಪಡಿಸಲಾಯಿತು.
ಮಡಿಕೇರಿಯ ಓಂಕಾರೇಶ್ವರ ದೇಗುಲದ ಆವರಣದಲ್ಲಿ ‘ಪುತ್ತರಿ’ (ಹುತ್ತರಿ) ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ಭಕ್ತರು ಸಾಮೂಹಿಕವಾಗಿ ಭತ್ತದ ಕದಿರು (ತೆನೆ) ತೆಗೆದರು ಪ್ರಜಾವಾಣಿ ಚಿತ್ರ: ರಂಗಸ್ವಾಮಿ  ಸಂಗ್ರಹ ಚಿತ್ರ
ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ  ‘ಪುತ್ತರಿ’ (ಹುತ್ತರಿ) ಆಚರಣೆಯನ್ನು ಶನಿವಾರ ರಾತ್ರಿ ವೀಕ್ಷಿಸಲು ಸೇರಿದ್ದ ಜನಸಮೂಹ    ಸಂಗ್ರಹ ಚಿತ್ರ

ಇದು ಕಾವೇರಿ ತವರ ಸಿರಿ ಹಬ್ಬ ವಿಶಿಷ್ಟ ಸಂಪ್ರದಾಯ, ಆಚರಣೆ ಹೊಂದಿರುವ ಪುತ್ತರಿ ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಹಬ್ಬ 

ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ದಿನ ನಿಗದಿ ಧಾನ್ಯಲಕ್ಷ್ಮಿಯನ್ನುಸಂಭ್ರಮದಿಂದ ಬರಮಾಡಿಕೊಳ್ಳುವ ಕೊಡಗಿನ ಪುತ್ತರಿ ಹಬ್ಬವನ್ನು ಡಿ. 4 ರಂದು ಗುರುವಾರ ಆಚರಿಸುವಂತೆ ನಿರ್ಧರಿಸಲಾಗಿದೆ. ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಈಚೆಗೆ ಜ್ಯೋತಿಷ್ಯದ ಪ್ರಕಾರ ದಿನ ನಿಗದಿ ಮಾಡಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು ವ್ಯವಸ್ಥಾಪನಾ ಸಮಿತಿ ಪ್ರಮುಖರ ಹಾಗೂ ಭಕ್ತರ ಸಮ್ಮುಖದಲ್ಲಿ ಅಮ್ಮಂಗೇರಿ ಜ್ಯೋತಿಷಿ ಶಶಿಕುಮಾರ್ ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದ್ದಾರೆ. ಅದರಂತೆ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಡಿ. 4 ರಂದು ಗುರುವಾರ ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನ ಪುತ್ತರಿ ಹಬ್ಬ ಆಚರಣೆ ನಡೆಯಲಿದೆ. ರಾತ್ರಿ 8.10ಕ್ಕೆ ನೆರೆ ಕಟ್ಟುವುದು ರಾತ್ರಿ 9.10ಕ್ಕೆ ಕದಿರು ತೆಗೆಯುವುದು. ಅನ್ನಪ್ರಸಾದಕ್ಕೆ 10.10 ಗಂಟೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಸಾರ್ವಜನಿಕರಿಗೆ ರಾತ್ರಿ 8.40ಕ್ಕೆ ನೆರೆ ಕಟ್ಟುವುದು ರಾತ್ರಿ 9.40ಕ್ಕೆ ಕದಿರು ತೆಗೆಯುವುದು ಭೋಜನಕ್ಕೆ ರಾತ್ರಿ 10.40ಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಇದಕ್ಕೂ ಮುನ್ನ ಡಿಸೆಂಬರ್ 4 ರಂದು ಗುರುವಾರ ಹಗಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.