ADVERTISEMENT

ಧಾರಾಕಾರ ಮಳೆ: ತುಂಬಿ ಹರಿದ ನದಿ, ತೊರೆ

ಮಳೆ– ಸೇತುವೆ, ಗದ್ದೆಗಳು ಮುಳುಗಡೆ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 20:12 IST
Last Updated 26 ಜೂನ್ 2025, 20:12 IST
ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮವು ಒಂದು ತಿಂಗಳಿನಲ್ಲಿ 3ನೇ ಬಾರಿ ಜಲಾವೃತಗೊಂಡಿದೆ
ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮವು ಒಂದು ತಿಂಗಳಿನಲ್ಲಿ 3ನೇ ಬಾರಿ ಜಲಾವೃತಗೊಂಡಿದೆ   

ಮೈಸೂರು/ಶಿವಮೊಗ್ಗ: ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಗುರುವಾರವೂ ಮುಂದುವರಿದಿದ್ದು, ಕಾವೇರಿ, ಕನ್ನಿಕಾ, ಲಕ್ಷ್ಮಣತೀರ್ಥ, ಬರಪೊಳೆ, ಕೊಂಗಣ ಹೊಳೆ ಸೇರಿದಂತೆ ಕೊಡಗಿನ ಎಲ್ಲ ನದಿ, ಹೊಳೆ, ತೊರೆಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಸೇತುವೆ, ಸಂಪರ್ಕ ರಸ್ತೆಗಳು, ಗದ್ದೆಗಳು ಮುಳುಗಡೆಯಾಗಿವೆ.

ಮಳೆ ಬಿಡುವು ನೀಡದಿರುವುದರಿಂದ ಕೊಡಗಿನಲ್ಲಿ ಅಂತ್ಯಸಂಸ್ಕಾರವೂ ಕಷ್ಟಕರವಾಗಿದೆ. ಗುಂಡಿ ತೆಗೆದ ಕಡೆಯಲ್ಲೆಲ್ಲ ನೀರು ಉಕ್ಕುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಒಂದು ತಿಂಗಳಿನಲ್ಲಿ 3ನೇ ಬಾರಿಗೆ ಜಲಾವೃತಗೊಂಡಿದೆ. ಪುಷ್ಪೋದ್ಯಾನ, ರಸ್ತೆಗಳಿಗೆ ನೀರು ನುಗ್ಗಿದೆ. ಮೇಲ್ಸೇತುವೆ ಇರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿಲ್ಲ.

ಜೂನ್ 27ರ ಬೆಳಿಗ್ಗೆ 8.30ರವರೆಗೂ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಂದು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿರಾಜಪೇಟೆ, ಕುಶಾಲನಗರದಲ್ಲಿ ಮಾತ್ರ ಮಳೆಯ ಅಬ್ಬರ ತಗ್ಗಿದೆ. 

ADVERTISEMENT

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಹೋಬಳಿಯಲ್ಲಿ 15 ಸೆಂ.ಮೀ ಮಳೆಯಾಗಿದ್ದು, ಕಕ್ಕಬ್ಬೆ ಹೊಳೆ ಮೈದುಂಬಿ ಹರಿಯುತ್ತಿದೆ.

ನಾಪೋಕ್ಲು–ವಿರಾಜಪೇಟೆ, ನಾಪೋಕ್ಲು- ಮೂರ್ನಾಡು ರಸ್ತೆಗಳಿಗೂ ನೀರು ನುಗ್ಗಿದೆ. ಸದ್ಯ ನಾಪೋಕ್ಲು ಪಟ್ಟಣಕ್ಕೆ ಮಡಿಕೇರಿ ಮತ್ತು ಭಾಗಮಂಡಲದೊಂದಿಗೆ ಸಂಪರ್ಕವಿದ್ದು, ವಿರಾಜಪೇಟೆ ಸಂಪರ್ಕ ಕಡಿತಗೊಂಡಿದೆ. ಮಳೆ ಮುಂದುವರಿದರೆ ನಾಪೋಕ್ಲು ದ್ವೀಪದಂತಾಗುವ ಭೀತಿ ಎದುರಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ವ್ಯಾಪ್ತಿಯಲ್ಲಿ 22 ಸೆಂ.ಮೀನಷ್ಟು ಮಳೆಯಾಗಿದ್ದು, ನಿಟ್ಟೂರು ಬಳಿಯ ಚಿಣ್ಣರಹಾಡಿಯ ಸಂಪರ್ಕ ಸೇತುವೆಯ ದಡ ಕುಸಿದಿದೆ. 

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಉಮ್ಮತ್ತೂರು-ಶುಕ್ರವಾರಸಂತೆ ಸಂಪರ್ಕಿಸುವ ಪ್ರಮುಖ ಸೇತುವೆ ಮುಳುಗಡೆಯಾಗಿತ್ತು. ನಡಗೆರೆ ಗ್ರಾಮಕ್ಕೆ ತೆರಳುವ ಸೇತುವೆ ಮುಳುಗಡೆಯಾಗಿದ್ದರಿಂದ ‌‌ಸಂಚಾರ ಸ್ಥಗಿತಗೊಂಡಿತ್ತು.

ಜಲ ದಿಗ್ಬಂಧನ: ಮಂಡ್ಯ ಜಿಲ್ಲೆ ಶ್ರೀರಂಗಪ‍ಟ್ಟಣ ತಾಲ್ಲೂಕಿನ ಕಾವೇರಿ ನದಿ ತೀರದಲ್ಲೂ ಕೃಷಿ ಜಮೀನುಗಳು ಜಲಾವೃತವಾಗಿವೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ನಿಲ್ಲಿಸುವ ಜಾಗ ಮುಳುಗಿದೆ. ದೊಡ್ಡೇಗೌಡನಕೊಪ್ಪಲು ಸಮೀಪ ನದಿಯ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದ ಸಂಪರ್ಕ ರಸ್ತೆ ಮುಳುಗಿದ್ದು, ಗಜಾನನ ಸ್ವಾಮೀಜಿ ಸೇರಿ ನಾಲ್ವರು ಜಲ ದಿಗ್ಬಂಧನದಲ್ಲಿದ್ದಾರೆ. ‘ಆಹಾರ, ನೀರು ಇನ್ನಿತರ ಅಗತ್ಯ ವಸ್ತುಗಳ ದಾಸ್ತಾನಿದೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು.

ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಹೀಗಾಗಿ ಗುರುವಾರ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಹಾಗೂ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಶಾಲೆ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು.

ಗಾಜನೂರಿನ ತುಂಗಾ ಜಲಾಶಯದ ಒಳಹರಿವು 44,158 ಕ್ಯುಸೆಕ್‌ ಇದೆ. ತುಂಗಾ ಹಾಗೂ ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ ಆಗಿವೆ. ತುಂಗಾ ಜಲಾಶಯದಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಶಿವಮೊಗ್ಗದ ಹೃದಯ ಭಾಗದಲ್ಲಿ ಹರಿಯುವ ತುಂಗೆ ಮೈದುಂಬಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಗುರುವಾರ ಮಧ್ಯಾಹ್ನದ ನಂತರ ಮತ್ತಷ್ಟು ಜೋರಾಗಿದೆ. ನದಿಗಳು, ಉಪನದಿಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ ಸುತ್ತಮತ್ತ ಮಳೆ ಅಬ್ಬರಿಸುತ್ತಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ ಹೇಮಾವತಿ ನದಿ ನೀರಿನ ಹರಿವು ಏರಿಕೆಯಾಗಿದ್ದು,  ಬೈದುವಳ್ಳಿ ಬಳಿ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ನೀರಿನ ಅಬ್ಬರಕ್ಕೆ ಕಾಫಿತೋಟ, ಅಡಿಕೆ ತೋಟ ಜಾಲಾವೃತಗೊಂಡಿವೆ. ಕೆಸವಳಲು ಕೂಡಿಗೆ ಸಂಗಮ ಕೂಡ ಭರ್ತಿಯಾಗಿದೆ.

ಕುದುರೆಮುಖ ಸುತ್ತಮುತ್ತ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ತುಂಗಾ ಮತ್ತು ಭದ್ರಾ ನದಿಗಳೂ ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ ಸುತ್ತಮುತ್ತ ಕೂಡ ಗುರುವಾರ ಮಳೆ ಸುರಿಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಆಗಾಗ ಮಳೆ ಸುರಿಯಿತು.

ಕೊಡಗಿನ ಹುದಿಕೇರಿಯಲ್ಲಿ 22 ಸೆಂ.ಮೀ, ಶ್ರೀಮಂಗಲ 21, ಶಾಂತಳ್ಳಿ 17, ಹೆತ್ತೂರು 16.7, ನಾ‍ಪೋಕ್ಲು 15, ಹಾನಬಾಳು 14.2, ವಿರಾಜಪೇಟೆ 14, ಯಸಳೂರು 13 ಸೆಂ.ಮೀ, ಅಮ್ಮತ್ತಿ 11, ಭಾಗಮಂಡಲ, 09 ಸೆಂ.ಮೀ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ಚಕ್ರಾದ ವಾರಾಹಿ ಯೋಜನಾ ಪ್ರದೇಶದಲ್ಲಿ 19.5 ಸೆಂ.ಮೀ, ಯಡೂರಿನಲ್ಲಿ 14.6 ಹಾಗೂ ಮಾಸ್ತಿಕಟ್ಟೆಯಲ್ಲಿ 14 ಸೆಂ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 14.75 ಸೆಂ.ಮೀ ಮಳೆ ಆಗಿದೆ. 

ಶಿರಾಡಿ ಘಾಟ್‌ನಲ್ಲಿ ರಾತ್ರಿ ಕಳೆದ ಪ್ರಯಾಣಿಕರು

ಹಾಸನ: ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿ ಬುಧವಾರ ತಡರಾತ್ರಿ ಭೂಕುಸಿತವಾಗಿದ್ದು ಶಿರಾಡಿ ಮಾರ್ಗದಲ್ಲಿ ವಾಹನಗಳ ಸಂಚಾರ ಗುರುವಾರ ಬೆಳಿಗ್ಗೆ 10 ಗಂಟೆಯವರೆಗೆ ಸ್ಥಗಿತವಾಗಿತ್ತು. ಮಧ್ಯಾಹ್ನದ ನಂತರ ವಾಹನಗಳ ಓಡಾಟ ಸಹಜವಾಗಿದೆ.

ಭಾರಿ ಮಳೆಯಿಂದ ಗುಡ್ಡದ ಮಣ್ಣು ಹಾಗೂ ಗಿಡಗಳು ಕೊಚ್ಚಿಕೊಂಡು ಹೆದ್ದಾರಿಯ ಮಧ್ಯದಲ್ಲಿ ಬಿದ್ದಿದ್ದರಿಂದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಬೆಳಿಗ್ಗೆಯೇ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದರು.

ರಾತ್ರಿಯಿಡೀ ಹೆದ್ದಾರಿಯಲ್ಲಿಯೇ ಕಳೆದ ಪ್ರಯಾಣಿಕರ ಗೋಳು ಹೇಳತೀರದಾಗಿತ್ತು. ಮಾರನಹಳ್ಳಿಯಿಂದ ಸಕಲೇಶಪುರದವರೆಗೆ ವಾಹನಗಳು ಸಾಲುಗಟ್ಟಿದ್ದವು. ಬೆಳಿಗ್ಗೆ 9.40ಕ್ಕೆ ಮಣ್ಣು ತೆರವುಗೊಳಿಸಿ ವಾಹನ ಸಂಚಾರ ಆರಂಭಿಸಲಾಯಿತು. 

ಗುಡ್ಡ ಕುಸಿತ ತಡೆಗೆ ₹400 ಕೋಟಿ ಮೊತ್ತದ ಕಾಮಗಾರಿ

ಚಿಕ್ಕಮಗಳೂರು: ಮಳೆನಾಡು ಹಾಗೂ ಕರಾವಳಿ ಪ್ರದೇಶಗಳ ಆರು ಜಿಲ್ಲೆಗಳಲ್ಲಿ ಗುಡ್ಡ ಕುಸಿತ ತಡೆಯಲು ₹400 ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಶೀಘ್ರವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ‘ಭೂಕುಸಿತದಿಂದ ಆಗಲಿರುವ ಅಪಾಯ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೊದಲ ಹಂತದಲ್ಲಿ ಜನ ವಸತಿ ಮೇಲೆ ಗುಡ್ಡ ಕುಸಿತವಾಗುವುದನ್ನು ತಡೆಯಲು ಕಾಮಗಾರಿ ಕೈಗೊತ್ತಿಕೊಳ್ಳಲಾಗುವುದು’ ಎಂದರು.

‘ಎರಡನೇ ಹಂತದಲ್ಲಿ ರಸ್ತೆಗಳ ಮೇಲೆ ಗುಡ್ಡ ಕುಸಿತ ತಡೆಯುವ ಕಾಮಗಾರಿಗೆ ಆದ್ಯತೆ ನೀಡಲಾಗುವುದು. ಮಳೆಗಾಲ ಮುಗಿದ ಕೂಡಲೇ ಅಕ್ಟೋಬರ್ ವೇಳೆಗೆ ಮೊದಲ ಹಂತದ ಕಾಮಗಾರಿ ಆರಂಭಿಸಬೇಕು. ಟೆಂಡರ್ ಸೇರಿ ಬೇಕಿರುವ ಪೂರ್ವ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು. ಕೇಂದ್ರ ಹಣಕಾಸು ಆಯೋಗದಿಂದಲೂ ಅನುದಾನ ಲಭ್ಯವಾಗುವ ಭರವಸೆ ಇದೆ’ ಎಂದು ಹೇಳಿದರು.

ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಕುಪ್ಪೋಟ್ ಸೇತುವೆ ಮೇಲೆ ಸುಮಾರು ಮೂರು ಅಡಿಗಳಿಗೂ ಅಧಿಕ ನೀರು ಹರಿಯುತ್ತಿದೆ.
ಕಾವೇರಿ ನದಿಯು ವಿರಾಜಪೇಟೆ ಸಮೀಪದ ಭೇತ್ರಿಯಲ್ಲಿ ಗುರುವಾರ ಸೇತುವೆಯಂಚಿನಲ್ಲಿ ಹರಿಯುತ್ತಿದೆ
ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ಗುರುವಾರ ಮಳೆಯಲ್ಲೇ ರೈತರು ಗದ್ದೆಯನ್ನು ಉಳುಮೆ ಮಾಡುತ್ತಿದ್ದರು
ಕೊಡಗು ಜಿಲ್ಲೆಯ ಅರಪಟ್ಟು ಗ್ರಾಮದ ಜುನೈದ್ ಎಂಬುವವರ ಮನೆಯ ಹಿಂಭಾಗ ಮಣ್ಣು ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.