ADVERTISEMENT

ನಾಪೋಕ್ಲು | ಬಿರುಸಿನ ಮಳೆ: ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 11:02 IST
Last Updated 16 ನವೆಂಬರ್ 2022, 11:02 IST
ನಾಪೋಕ್ಲುವಿನಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯಿತು
ನಾಪೋಕ್ಲುವಿನಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯಿತು   

ನಾಪೋಕ್ಲು: ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಂಗಳವಾರ ಸಂಜೆ ಬಿರುಸಿನ ಮಳೆಯಾಯಿತು.

ಸಮೀಪದ ಕಕ್ಕಬೆ, ನೆಲಜಿ, ಎಮ್ಮೆಮಾಡು, ಚೋನಕೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ರಭಸದ ಮಳೆ ಸುರಿಯಿತು ಸಂಜೆ 4 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆ ನಿರಂತರವಾಗಿ ಸುರಿಯಿತು.

ನವೆಂಬರ್ ತಿಂಗಳ ಮಧ್ಯಭಾಗವಾದರೂ ಮಳೆ ದೂರವಾಗದ ಹಿನ್ನೆಲೆಯಲ್ಲಿ ಕಾಫಿ ತೋಟಗಳ ನಿರ್ವಹಣೆಗೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಮೋಡದ ವಾತಾವರಣವಿದ್ದು ಒಂದೆರಡು ಹಲವೆಡೆ ತುಂತುರು ಮಳೆ ಸುರಿಯಿತು. ಮಳೆಯಿಂದಾಗಿ ರೈತರಲ್ಲಿ ಆತಂಕ ಎದುರಾಗಿದೆ. ಕೊಯ್ಲುಮಾಡಿದ ಅರೇಬಿಕಾ ಕಾಫಿ ಅಂಗಳದಲ್ಲಿ ಕೊಳೆಯತೊಡಗಿದೆ.

ಕಳೆ ನಿರ್ಮೂಲನೆ ಮಾಡುವ ಹೆರತೆ ಕೆಲಸ, ಕಾಫಿ ಕೊಯ್ಲು ಸೇರಿದಂತೆ ಹತ್ತು ಹಲವು ಕೆಲಸ ಕಾರ್ಯಗಳಿಗೆ ಮಳೆಯಿಂದಾಗಿ ಅಡ್ಡಿಯಾಗಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಯ ಕಕ್ಕಬೆ, ನೆಲಜಿ, ಬಲಮಾವಟಿ, ಪುಲಿಕೋಟು, ಪೇರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅರೇಬಿಕಾ ಕಾಫಿಯ ಕೊಯ್ಲು ಮಾಡಲಾಗಿದ್ದು ಅವನ್ನು ಒಣಗಿಸಲು ಬೆಳೆಗಾರರು ಪರದಾಡುವಂತೆ ಆಗಿದೆ.

ಬಿಸಿಲಿನ ಪ್ರಖರತೆ ಇಲ್ಲದ್ದರಿಂದ ಕೊಯ್ಲು ಮಾಡಿದ ಕಾಫಿ ಒಣಗಲು ವಾರಗಟ್ಟಲೆ ತೆಗೆದುಕೊಳ್ಳುತ್ತಿದೆ. ಈ ನಡುವೆ ಮಳೆಯೂ ಸುರಿಯುತ್ತಿದ್ದು ಒಣಗಲು ಹಾಕಿದ ಕಾಫಿ ಕೊಳೆಯುತ್ತಿದೆ. ಕಳೆ ನಿರ್ಮೂಲನೆ ಮಾಡುವ ಹೆರತೆ ಕೆಲಸ ಬಹುತೇಕ ತೋಟಗಳಲ್ಲಿ ನಡೆಯುತ್ತಿದ್ದು ಮಳೆಯಿಂದಾಗಿ ಆ ಕೆಲಸಕ್ಕೂ ಅಡ್ಡಿಯಾಗಿದೆ.

ಒಮ್ಮೆ ಕಳೆ ನಿರ್ಮೂಲನೆ ಮಾಡಿದರೂ ಪದೇ ಪದೇ ಹುಟ್ಟಿ ಸಮಸ್ಯೆಯಾಗಿ ಕಾಡುತ್ತಿದೆ. ಮಳೆಯಿಂದಾಗಿ ಕಾಫಿತೋಟದ ಕೆಲಸಗಳು ನಿಧಾನವಾಗಿ ಸಾಗುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.