ADVERTISEMENT

ಸೋಮವಾರಪೇಟೆ | ಪ್ರಕೃತಿ ವಿಕೋಪ ಪೂರ್ವಭಾವಿ ಸಭೆ

ಪ್ರಕೃತಿ ವಿಕೋಪ ಪೂರ್ವಭಾವಿ ಸಭೆಯಲ್ಲಿ ಇನ್‌ಸ್ಪೆಕ್ಟರ್ ಮುದ್ದುಮಹದೇವ ಮನವಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:12 IST
Last Updated 3 ಜುಲೈ 2025, 14:12 IST
<div class="paragraphs"><p>ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಮುದ್ದುಮಹದೇವ ಅವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಪೂರ್ವಭಾವಿ ಸಭೆ ಗುರುವಾರ ನಡೆಯಿತು</p></div>

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಮುದ್ದುಮಹದೇವ ಅವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಪೂರ್ವಭಾವಿ ಸಭೆ ಗುರುವಾರ ನಡೆಯಿತು

   

ಸೋಮವಾರಪೇಟೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಮುದ್ದುಮಹದೇವ ಅವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಪೂರ್ವಭಾವಿ ಸಭೆ ಗುರುವಾರ ನಡೆಯಿತು.

‘ಪ್ರಕೃತಿ ವಿಕೋಪ ತುರ್ತು ಸಂದರ್ಭಗಳಲ್ಲಿ ಸಂಘ –ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ಸ್ವಯಂ ಸೇವಕರು ಸೇರಿದಂತೆ ಸಾರ್ವಜನಿಕರು ಇಲಾಖೆಯೊಂದಿಗೆ ನೋಂದಾಯಿಸಿಕೊಂಡು ನಮ್ಮೊಂದಿಗೆ ಕೈಜೋಡಿಸುವ ಮೂಲಕ ಅನಾಹುತಗಳನ್ನು ತಡೆಯಲು ಸಹಕರಿಸಬೇಕು’ ಎಂದು ಮುದ್ದುಮಹದೇವ ತಿಳಿಸಿದರು.

ADVERTISEMENT

‘ಈಗಾಗಲೇ ಸಾಕಷ್ಟು ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಳವಾಗಬಹುದು. ಈ ಹಿನ್ನೆಲೆಯಲ್ಲಿ ಮಳೆಯಿಂದ ಯಾವುದಾದರೂ ಅನಾಹುತ ಸಂಭವಿಸಿದ್ದಲ್ಲಿ ತೆಗೆದುಕೊಳ್ಳಬೇಕಾದ ಕ್ರಮ, ಅಪಾಯಕಾರಿ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸುವ ಸಂಬಂಧ ಮೇಲಧಿಕಾರಿಗಳ ಸೂಚನೆಯಂತೆ ಸಭೆ ನಡೆಸಲಾಗುತ್ತಿದೆ. ತಮ್ಮ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವನೀಯ ಪ್ರದೇಶಗಳ ಬಗ್ಗೆ ಮುಂಚಿತವಾಗಿ ಮಾಹಿತಿ ತಿಳಿಸಬೇಕು’ ಎಂದರು.

‘ತಾಲ್ಲೂಕಿನ ಕಿಕ್ಕರಳ್ಳಿ, ಜೇಡಿಗುಂಡಿ, ಮಕ್ಕಳಗುಡಿ ಬೆಟ್ಟ, ಕುಂಬಾರಗಡಿಗೆ, ಮಾದಾಪುರ ಗ್ರಾಮಗಳಲ್ಲಿ ಭೂ ಕುಸಿತ ಪ್ರದೇಶಗಳಿವೆ. 2018ರಲ್ಲಿ ನಡೆದ ಮಹಾ ಮಳೆಯಿಂದ ನಡೆದ ಅನಾಹುತದ ಸಂದರ್ಭ ಸಾರ್ವಜನಿಕರೇ ಮೊದಲು ಸಹಕಾರ ನೀಡಿದ್ದಾರೆ’ ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು.

‘ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಕೆಳಗಿನ ಪೆಟ್ರೋಲ್ ಬಂಕ್ ಹಿಂಭಾಗ ಮಣ್ಣು ತೆಗೆದಿದ್ದು, ಕಟ್ಟಡಗಳು ಕುಸಿಯುವ ಭೀತಿ ಎದುರಾಗಿದೆ ಅಗತ್ಯ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

‘ಸದ್ಯಕ್ಕೆ ಅಪಾಯಕಾರಿ ಸ್ಥಳಕ್ಕೆ ಟಾರ್ಪಲ್ ಮುಚ್ಚಲು ನೋಟಿಸ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಇನ್‌ಸ್ಪೆಕ್ಟರ್ ತಿಳಿಸಿದರು.

‘ಚಿಕ್ಕತೋಳೂರು ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವಿದ್ದು, ‌ರಾತ್ರಿ ಇಡೀ ಲಾರಿಗಳು ಸಂಚರಿಸುತ್ತಿವೆ. ಹರಪಳ್ಳಿಯಲ್ಲಿ ಮನೆ ಕುಸಿಯುವ ಭೀತಿ ಇದೆ. ದೊಡ್ಡಮನೆಕೊಪ್ಪದಲ್ಲಿ ಬೆಟ್ಟದ ಸಾಲುಗಳಲ್ಲಿ ಕಲ್ಲುಗಳು ಕುಸಿಯುತ್ತಿದೆ. ಮುಂಜಾಗ್ರತಾ ಕ್ರಮ ಅಗತ್ಯ’ ಎಂದು ಚಿಕ್ಕತೋಳೂರು ಗ್ರಾಮದ ಶೇಖರ್ ರುದ್ರಪ್ಪ ಸಭೆಯ ಗಮನಕ್ಕೆ ತಂದರು.

‘ಈ ಬಗ್ಗೆ ತಾಲ್ಲೂಕು ಆಡಳಿತದೊಂದಿಗೆ ಚರ್ಚಿಸುತ್ತೇವೆ’ ಎಂದು ಇನ್‌ಸ್ಪೆಕ್ಟರ್ ತಿಳಿಸಿದರು.

‘ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಇದ್ದು, ಅವರನ್ನು ಬಳಸಿಕೊಳ್ಳಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ‘ಸಿ’ ಮತ್ತು ‘ಡಿ’ ಕೆಟಗರಿ ಮನೆಗಳ ಪಟ್ಟಿ ಇದೆ. ಅವರನ್ನು ತಕ್ಷಣ ಸ್ಥಳಾಂತರಿಸಿದರೆ ಮುಂದಿನ ಅನಾಹುತ ತಪ್ಪಿಸಬಹುದು’ ಎಂದು ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ತಿಮ್ಮಯ್ಯ ಹೇಳಿದರು.

‘ಕೆ.ಟಿ.ಡಿ.ಒ ಸಂಸ್ಥೆಯಿಂದ ದಿನದ 24 ಗಂಟೆಯೂ ಉಚಿತ ಆಂಬ್ಯುಲೆನ್ಸ್ ಸೇವೆ ನೀಡಲಾಗುವುದು. ತುರ್ತು ಸಂದರ್ಭ ಮೊ: 9738577577, 9972707718ನ್ನು ಸಂಪರ್ಕಿಸಬಹುದು’ ಎಂದು ಸಂಘಟನೆಯ ಕೆ.ಎನ್. ದೀಪಕ್ ಹೇಳಿದರು.

‘ಜೆಸಿಬಿ, ಪಿಕ್ ಅಪ್‌ಗಳಿಗೆ ನಮ್ಮನ್ನು ಸಂಪರ್ಕಿಸಬಹುದು’ ಎಂದು ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ‘ಶಾಸಕರೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ತಕ್ಷಣ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಧರ್ಮಸ್ಥಳ ಸಂಸ್ಥೆಯ ಶೌರ್ಯ ಸಂಸ್ಥೆ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದು, ನಮ್ಮೊಂದಿಗೆ ಮಹಿಳಾ ಸ್ವಯಂ ಸೇವಕರೂ ಇದ್ದು, ಅನಾಹುತ ಸಂಭವಿಸಿದಲ್ಲಿ ಮಾಹಿತಿ ನೀಡಿದಲ್ಲಿ ಸ್ಪಂದಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ರಾಮ್ ದಾಸ್ ಸಭೆಗೆ ತಿಳಿಸಿದರು.

Highlights - ಭೂಕುಸಿತ ಸಂಭವನೀಯ ಪ್ರದೇಶಗಳ ಮಾಹಿತಿ ನೀಡಿ ಮನೆ ಕುಸಿಯುವ ಭೀತಿ: ಕ್ರಮಕ್ಕೆ ಆಗ್ರಹ ಅಪಾಯಕಾರಿ ಸ್ಥಳಗಳನ್ನು ಟಾರ್ಪಾಲ್ ಮುಚ್ಚಲು ನೋಟಿಸ್

Cut-off box - ‘ಕಾಳಜಿ ಕೇಂದ್ರಗಳ ಮಾಹಿತಿ’ ‘ಯಾವ ಭಾಗಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಎಂಬುದರ ಮಾಹಿತಿ ಪಡೆಯುತ್ತಿದ್ದೇವೆ. ಮುಂದೆಯೂ ಮಳೆಯಾದರೆ ಸಮಸ್ಯೆಗಳು ಸೃಷ್ಟಿಯಾಗಬಹುದು. ಈಗ ಮುಂಜಾಗ್ರತೆ ಅಗತ್ಯವಾಗಿದೆ. ನಾಲ್ಕು ವಾಹನಗಳ ಮಾಹಿತಿ ಪಡೆದಿದ್ದೇವೆ. ಹಲವರು ಸಹಕಾರದ ಭರವಸೆ ನೀಡಿದ್ದಾರೆ. ತಾಲ್ಲೂಕು ಆಡಳಿತವೂ ಕ್ರಮ ಕೈಗೊಳ್ಳುತ್ತದೆ’ ಎಂದು ಮುದ್ದುಮಹದೇವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.