ADVERTISEMENT

ಕೊಡಗು‌ | ಅಪರೂಪದ ರಂಗಭೂಮಿ ಕಲಾವಿದ ಭರಮಣ್ಣ ಬೆಟಗೇರಿ

ಕೊಡಗಿನ ರಂಗಭೂಮಿಯ ಸಾಧಕ, ಅಪಾರ ಜನಮನ್ನಣೆ ಗಳಿಸಿದ ಕಲಾವಿದ

ಜೆ.ಸೋಮಣ್ಣ
Published 16 ಜುಲೈ 2025, 4:35 IST
Last Updated 16 ಜುಲೈ 2025, 4:35 IST
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಅನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶಿಶುನಾಳ ಶರೀಫ ನಾಟಕದಲ್ಲಿ ಭರಮಣ್ಣ ಬೆಟಗೇರಿ
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಅನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶಿಶುನಾಳ ಶರೀಫ ನಾಟಕದಲ್ಲಿ ಭರಮಣ್ಣ ಬೆಟಗೇರಿ   

ಗೋಣಿಕೊಪ್ಪಲು: ‘ಯಾರು ಸಂಸ್ಕೃತಿ ನಡೆನುಡಿ ಎಂಬ ಹೊದಿಕೆಯನ್ನು ಹೊದೆಯುವುದಿಲ್ಲವೋ ಅಂತಹವರು ಬಟ್ಟೆ ತೊಟ್ಟರೂ ಬೆತ್ತಲಾದಂತೆಯೇ ಸರಿ’ ಇದು ವಿಲಿಯಂ ಶೇಕ್ಸ್‌ಪಿಯರ್ ಅವರ ನಾಟಕದ ಒಂದು ಸಾಲು. ಇದು ನೀನಾಸಂ ಕಲಾವಿದ ಭರಮಣ್ಣ ಬೆಟಗೇರಿ ಅವರ ನಾಲಿಗೆಯ ಮೇಲೆ ಯಾವತ್ತೂ ನಲಿದಾಡುತ್ತದೆ.

ಭರಮಣ್ಣ ಬೆಟಗೇರಿ ಹೆಗ್ಗೋಡಿನ ನೀನಾಂಸ ಕಲಾವಿದ. ಕೊಪ್ಪಳದ ಕರಮುಡಿ ಗ್ರಾಮದವರು. 30 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಕೊಡಗಿಗೆ ಬಂದ ಅವರು ಇದೀಗ ಕುಟುಂಬ ಸಮೇತ ಕುಶಾಲನಗರದ ಬಳಿಯ ಕೂಡ್ಲೂರಿನಲ್ಲಿ ನೆಲೆಸಿದ್ದಾರೆ.

ಕೊಡಗಿನ ರಂಗಭೂಮಿ ಕಲೆಯೊಂದಿಗೆ ಗುರುತಿಸಿಕೊಂಡ ಅಪರೂಪದ ಕಲಾವಿದರಲ್ಲಿ ಭರಮಣ್ಣ ಬೆಟಗೇರಿ ಪ್ರಮುಖರು.

ADVERTISEMENT

ಕನ್ನಡ ಪ್ರಾಧ್ಯಾಪಕ ಬಸವರಾಜ ಕೆಂಚರೆಡ್ಡಿ ಅವರ ಭೋಧನೆಯು ಭರಮಣ್ಣ ಅವರನ್ನು 1990ರಲ್ಲಿ ಹೆಗ್ಗೋಡಿನ ನೀನಾಸಂಗೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸಿತು. ಎರಡೂವರೆ ವರ್ಷ ಅಲ್ಲಿ ತರಬೇತಿ ಮುಗಿಸಿ ಮತ್ತೆ ಒಂದು ವರ್ಷಗಳ ಕಾಲ ಸುತ್ತಾಟದ ನಾಟಕದಲ್ಲಿ ಪಾಲ್ಗೊಂಡರು.

ದೆಹಲಿ, ಕೋಲ್ಕೋತ್ತಾ, ಚೆನ್ನೈ, ಹೈದರಾಬಾದ್, ಮುಂಬೈ, ಕೇರಳ ಮೊದಲಾದ ಕಡೆಗಳಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿ ‘ತಿರುಗಾಟ’ ತಂಡದೊಂದಿಗೆ ಅಪಾರ ಜನಮನ್ನಣೆ ಗಳಿಸಿದರು.

ಪ್ರೇಮಚಂದ್ರ ಅವರ ‘ಕಫನ್’ (ಹೆಣದ ಬಟ್ಟೆ) ನಾಟಕದಲ್ಲಿ ಅಭಿನಯಿಸಿದ್ದು, ಸಾಕಷ್ಟು ಹೆಸರು ತಂದುಕೊಟ್ಟಿತ್ತು. ನಂತರ ಅವರು 26 ದಿನಗಳ ಕಾಲ ದೆಹಲಿಯಲ್ಲಿ ನಡೆದ ರಂಗ ಶಿಬಿರದಲ್ಲಿಯೂ ಪಾಲ್ಗೊಂಡು ರಂಗ ಶಿಕ್ಷಣ ಪಡೆದರು.

ನೀನಾಸಂನಲ್ಲಿ ತರಬೇತಿ ಮುಗಿಸಿದ್ದ ಭರಮಣ್ಣ ಕುಶಾಲನಗರದ ವೀರಭೂಮಿ ಕಲಾಗ್ರಾಮಕ್ಕೆ ಕಲಾವಿದರಾಗಿ ಬಂದರು. ಈ ವೇಳೆಯಲ್ಲಿ ಉತ್ತರ ಕರ್ನಾಟಕ ಭಾಗದ ಇತರ 20 ಕಲಾವಿದರೂ ಬಂದಿದ್ದರು. ಇವರ ಕಲಾ ಪ್ರತಿಭೆಯನ್ನು ನೋಡುವುದಕ್ಕಾಗಿಯೇ ಜನರು ಅಂದು ‘ವೀರಭೂಮಿ’ಗೆ ಮುಗಿಬೀಳುತ್ತಿದ್ದರು. ನಂತರ, ಭರಮಣ್ಣ ಹಿಂದುರುಗಿ ನೋಡಲಿಲ್ಲ. ತಮ್ಮ ಮೂವರು ಸ್ನಾತಕೋತ್ತರ ಪದವಿ ಪಡೆದ ಮಕ್ಕಳು ಮತ್ತು ಮಡದಿಯೊಂದಿಗೆ ಕುಶಾಲನಗರದಲ್ಲಿಯೇ ನೆಲೆಸಿದ್ದಾರೆ.

ಭರಮಣ್ಣ ಅವರ ಪ್ರತಿಭೆಯನ್ನು ಗುರುತಿಸಿ ಕುಶಾಲನಗರ ತಾಲ್ಲೂಕು ಆಡಳಿತದ ಗಣರಾಜ್ಯೋತ್ಸವ ಪ್ರಶಸ್ತಿ, ಕಾರ್ಯನಿರತ ಪತ್ರಕರ್ತರ ಸಂಘಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

60ರ ಹರೆಯದ ಭರಮಣ್ಣ ಈಗಲೂ ಬಣ್ಣ ಹಚ್ಚಿ, ಉಡುಗೆ ತೊಟ್ಟು ರಂಗಭೂಮಿಯ ಮೇಲೆ ಅಭಿನಯಿಸತೊಡಗಿದರೆ ಅವರ ಭಾಷೆ, ಧ್ವನಿ, ಮಾತಿನ ಸ್ಪಷ್ಟತೆ ಸಂಭಾಷಣೆ ಇವುಗಳಿಗೆ ಮಾರು ಹೋಗದವರಿಲ್ಲ.

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಅನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶಿಶುನಾಳ ಶರೀಫ ನಾಟಕದಲ್ಲಿ ಭರಮಣ್ಣ ಬೆಟಗೇರಿ
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಅನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶಿಶುನಾಳ ಶರೀಫ ನಾಟಕದಲ್ಲಿ ಭರಮಣ್ಣ ಬೆಟಗೇರಿ
ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಾಟಕ ತರಬೇತಿ ನೀಡುತ್ತಿರುವ ‌ಭರಮಣ್ಣ

‘ರಂಗಭೀಷ್ಮ’ರ ಪ್ರಭಾವ

ಹೆಗ್ಗೋಡಿನಲ್ಲಿ ‘ರಂಗಭೂಮಿಯ ಭೀಷ್ಮ’ರೆನಿಸಿದ ಬಿ.ವಿ.ಕಾರಂತ ಕೆ.ವಿ.ಸುಬ್ಬಣ್ಣ ಶಿವರಾಮ ಕಾರಂತ ಗಿರೀಶ್ ಕಾರ್ನಾಡ್ ಫ್ರಿನ್ಸ್ಫರ್ಡ್ ಜರ್ಮನ್ ಚಿದಂಬರ ರಾವ್ ಜಂಬೆ ವೆಂಕಟರಮಣ ಐತಾಳ್ ಮೊದಲಾದ ಖ್ಯಾತ ನಾಮರಿಂದ ತರಬೇತಿ ಪಡೆಯುವ ಅಮೂಲ್ಯ ಅವಕಾಶ ಇವರಿಗೆ ಲಭಿಸಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭರಮಣ್ಣ ಅವರು ನಾಟಕವನ್ನೇ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಬೆಳೆದಿದ್ದಾರೆ. ವಿಲಿಯಂ ಶೇಕ್ಸ್‌ಪೀಯರ್‌ ಅವರ ‘ಒಥೆಲೊ’ ‘ಎ ಮಿಡ್ ಸಮ್ಮರ್ ನೈಟ್ಸ್‌ ಡ್ರೀಂ’ ಮೊದಲಾದ ನಾಟಕಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ಇವರಿಗೆ ಹೆಸರು ತಂದುಕೊಟ್ಟ ಪಾತ್ರವೆಂದರೆ ಮಾಕ್ಸಿಂ ಗಾರ್ಕಿ. ಪ್ರಸನ್ನ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ‘ಹದ್ದು ಮೀರಿದ ಹಾದಿ’ ‘ಕಣಿವೆಯ ನೆಳಲಲ್ಲಿ’ ಮೊದಲಾದವುಗಳಲ್ಲಿ ತಮ್ಮ ಅಪ್ರತಿಮ ಪ್ರತಿಭೆ ಮೆರೆದಿದ್ದಾರೆ. ಶಿವಮೊಗ್ಗದಲ್ಲಿ ಸಾಕ್ಷರತಾ ಆಂದೋಲನದ ‘ಅಕ್ಷರತುಂಗ’ದಲ್ಲಿ ಜಿಲ್ಲಾಡಳಿತದೊಂದಿಗೆ ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ಬಿ.ವಿ.ಕಾರಾಂತರ ‘ಪಂಜರದ ಶಾಲೆ’ ಮೊಗಳ್ಳಿ ಗಣೇಶ್ ಅವರ ‘ಮೂಟೆ’ ಸಿ.ಬಸವಲಿಂಗಯ್ಯ ಅವರ ‘ಕಲಿತ ಚಾಂಡಾಲರು’ ಪ್ರೇಮಚಂದ್ರರರ ‘ಸೇರು ಸವ್ವಾಸೇರು’ ಮೊದಲಾದ ನಾಟಕಗಳನ್ನು ನಿರ್ದೇಶನ ಮಾಡಿ ಹಳ್ಳಿ ಜನರ ಮನದಲ್ಲಿ ಇವು ಸದಾ ಹಸಿರಾಗಿರುವಂತೆ ಶ್ರಮಿಸಿದರು.

ಮಕ್ಕಳಿಗೆ ನಾಟಕ

ಭರಮಣ್ಣ 6 ವರ್ಷಗಳ ಕಾಲ ಭಾಗಮಂಡಲದ ವಾಜಪೇಯಿ ವಸತಿ ಶಾಲೆಯಲ್ಲಿ ನೌಕರರಾಗಿ ಕೆಲಸ ಮಾಡಿದ್ದಾರೆ. ಈ ವೇಳೆಯಲ್ಲಿ ಅವರು ಮಕ್ಕಳಿಗೆ ಪರಿಸರ ಜ್ಞಾನ ಮೂಡಿಸಲು ‘ನಮ್ಮ ನೆಲ ನಮ್ಮಭೂಮಿ’ ‘ನನಗೂ ಅಕ್ಷರಬೇಕು’ ಮೊದಲಾದ ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪಿರಿಯಾಟ್ಟಣ ತಾಲ್ಲೂಕು ಬೆಟ್ಟದಪುರದ ಅನಿಕೇತನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೀದಿ ನಾಟಕ ಮತ್ತು ಪರಿಸರ ಅರಿವು ನಾಟಕ ತರಬೇತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.