ADVERTISEMENT

ವಾರದೊಳಗೆ ಕಿತ್ತು ಬಂದ ಡಾಂಬರು: ಆಡಿನಾಡೂರು ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:17 IST
Last Updated 27 ಡಿಸೆಂಬರ್ 2022, 6:17 IST
ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ದುರಸ್ತಿ ಪಡಿಸಿದ ನಂತರವೂ ಕಿತ್ತುಬರುತ್ತಿರುವುದನ್ನು ಗ್ರಾಮಸ್ಥರು ತೋರಿಸುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ದುರಸ್ತಿ ಪಡಿಸಿದ ನಂತರವೂ ಕಿತ್ತುಬರುತ್ತಿರುವುದನ್ನು ಗ್ರಾಮಸ್ಥರು ತೋರಿಸುತ್ತಿರುವುದು.   

ಸೋಮವಾರಪೇಟೆ: ‘ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸು ವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶ ಬಂದ ನಂತರ ಮತ್ತೊಮ್ಮೆ ಕಾಮಗಾರಿ ನಡೆಸಿ ಗುಂಡಿ ಮುಚ್ಚಿದ ಒಂದೇ ದಿನದಲ್ಲಿ ಮತ್ತೆ ಡಾಂಬರ್ ಕಿತ್ತು ಬರುತ್ತಿದೆ’ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ನೇರುಗಳಲೆ ಹಾಗೂ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದ ದುರಸ್ತಿ ಕಂಡ ರಸ್ತೆಯ ಸ್ಥಿತಿ ಇದು.

ಅಬ್ಬೂರುಕಟ್ಟೆಯಿಂದ ಆಡಿನಾಡೂರು ಮಾರ್ಗವಾಗಿ ಹೆಬ್ಬಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿದೆ.

ADVERTISEMENT

ಸರಿಪಡಿಸುವಂತೆ ಗ್ರಾಮದ ನಿವಾಸಿ ಎಸ್.ಈ. ಅಣ್ಣಯ್ಯ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ರಸ್ತೆ ಸರಿಪಡಿಸುವಂತೆ ಕೊಡಗು ಜಿಲ್ಲಾ ಪಂಚಾಯಿತಿ ಕಚೇರಿಗೆ ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಬಂದಿತ್ತು. ಹಿಂದಿನ ವಾರ ಇಲಾಖೆ ಗುಂಡಿ ಮುಚ್ಚಿಸುವ ಕೆಲಸವನ್ನು ಮಾಡಿತ್ತು. ಆದರೆ, ಸರಿಯಾಗಿ ಕಾಮಗಾರಿ ನಿರ್ವಹಿಸದ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಮತ್ತೆ ಕಿತ್ತು ಬರಲು ಶುರುವಾಗಿದೆ.

‘ಇಲಾಖಾಧಿಕಾರಿಗಳ ಗಮನಕ್ಕೆ ಪುನಃ ತರಲಾಗಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡಿರುವುದರಿಂದ ಕಿತ್ತು ಬರುತ್ತಿದೆ’ ಎಂದು ಗ್ರಾಮಸ್ಥರು ಹೇಳಿದರು.

ಈ ರಸ್ತೆಯಲ್ಲಿ ಜಲ್ಲಿ ಕಲ್ಲು ತುಂಬಿದ ಬೃಹತ್ ಟಿಪ್ಪರ್‌ಗಳು ಸಂಚರಿಸುತ್ತಿರುವುದರಿಂದ ಹಾಳಾಗುತ್ತಿದೆ. ರಸ್ತೆಯಲ್ಲಿ ಎಷ್ಟು ಪ್ರಮಾಣದ ತೂಕದ ಲಾರಿ ಸಂಚರಿಸಬಹುದು ಎಂದು ಇಲಾಖೆಯಿಂದ ಮಾಹಿತಿ ಪಡೆದು, ಹೆಚ್ಚುವರಿ ಲೋಡ್ ಮಾಡಿ ಸಂಚರಿಸುವ ಲಾರಿಗಳನ್ನು ತಡೆಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ರಸ್ತೆಯ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಮಾಡಿರುವ ಒಂದು ಮೋರಿ ತ್ಯಾಜ್ಯ ತುಂಬಿರುವುದರಿಂದ ಸರಾಗವಾಗಿ ನೀರು ಹರಿಯುತ್ತಿಲ್ಲ. ಕೂಡಲೇ ಸಮಸ್ಯೆಗಳನ್ನು ಸರಿಪಡಿಸುವಂತೆ ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎಂ. ಶಿವದಾಸ್, ಕಾರ್ಯದರ್ಶಿ ಎ.ಎಂ. ಸುನೀಲ್, ಪಂಚಾಯಿತಿ ಸದಸ್ಯರಾದ ವಿರೂಪಾಕ್ಷ, ಹಿರಿಯರಾದ ಬಸಪ್ಪ, ಪಿ.ವಿ. ಕೃಷ್ಣಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.