ಕುಶಾಲನಗರ: ‘ಪಟ್ಟಣದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ಪುರಸಭೆ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ₹2 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಅಧಿಕಾರಿಗಳೊಂದಿಗೆ ಶಾಸಕರು ಮಂಗಳವಾರ ಅರ್ಧಕ್ಕೆ ಸ್ಥಗಿತಗೊಂಡ ಪುರಸಭಾ ಕಟ್ಟಡದ ಪರಿಶೀಲನೆ ನಡೆಸಿ ಮಾತನಾಡಿದರು.
‘ಕಟ್ಟಡದ ಒಳಗೆ ಸಂಪೂರ್ಣ ಕತ್ತಲೆ ಆವರಿಸಿದೆ. ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಆಗಿದೆ. ಮುಂದಿನ ದಿನಗಳಲ್ಲಿ ನೈಸರ್ಗಿಕವಾಗಿ ಗಾಳಿ ಬೆಳಕಿನಿಂದ ಕೂಡಿರುವ ರೀತಿಯಲ್ಲಿ ನವೀಕರಣ ಮಾಡಿ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದರು.
ಅಪೂರ್ಣ ಕಟ್ಟಡ ಉದ್ಘಾಟನೆ: ಈ ಹಿಂದೆ ನೂತನ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ₹5 ಕೋಟಿ ಅನುದಾನದಲ್ಲಿ ಪರಿಪೂರ್ಣ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಕೆಲಸ ಮುಗಿಯುವ ಮುನ್ನವೇ ಕಟ್ಟಡಕ್ಕೆ ನಾಮಫಲಕ ಹಾಕಿ ಉದ್ಘಾಟನೆ ಮಾಡಲಾಗಿದೆ. ನಾನು ರಾಜಕೀಯ ಮಾಡಲ್ಲ, ನನಗೆ ಅಭಿವೃದ್ಧಿ ಮುಖ್ಯ. ಬೋರ್ಡ್ ಹಾಕಿಸಿಕೊಳ್ಳುವುದು ಮುಖ್ಯವಲ್ಲ’ ಎಂದರು.
ಅಹವಾಲು ಸ್ವೀಕಾರ: ಮುಳ್ಳುಸೋಗೆ ಶಾಸಕರ ಕಚೇರಿಯಲ್ಲಿ ಮಹಾಮಳೆಯಿಂದ ನೊಂದ ಜನರ ಸಮಸ್ಯೆಗಳನ್ನು ಶಾಸಕ ಡಾ.ಮಂತರ್ ಗೌಡ ಆಲಿಸಿದರು.
ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಸಮಸ್ಯೆ ಆಲಿಸಿದ ಶಾಸಕರು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ಮಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸೆಸ್ಕ್ ಅಧಿಕಾರಿಗಳ ತರಾಟೆ: ತಾಲ್ಲೂಕಿನ ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮಂತರ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ‘ಮಳೆಗಾಲದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿ ಹಾನಿಯಾಗಿರುವ ವಿದ್ಯುತ್ ಕಂಬಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿಕೊಡಿ’ ಎಂದು ಸಲಹೆ ನೀಡಿದರು.
ಸುಂಟಿಕೊಪ್ಪ, ಮಾದಪುರ ಭಾಗದಲ್ಲಿ ಕೆಲಸ ಸರಿಯಾಗಿ ಆಗಿಲ್ಲ. ಎಲ್ಲಾ ಬಡಾವಣೆಗಳ ಟ್ರಾನ್ಸ್‌ಫಾರ್ಮರ್ ಬಗ್ಗೆ ಮಾಹಿತಿ ನೀಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯರಾದ ಶೇಕ್ ಖಲಿಮುಲ್ಲಾ, ಎಂ.ಕೆ. ದಿನೇಶ್, ನಾಮನಿರ್ದೇಶಿತ ಸದಸ್ಯ ಶಿವಶಂಕರ್, ಕಿರಣ್, ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಅಧಿಕಾರಿ ಸಂತೋಷ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸಹಾಯಕ ಎಂಜಿನಿಯರ್ ರಂಗರಾಮ್ , ಸೆಸ್ಕ್ ಸಹಾಯಕ ಎಂಜಿನಿಯರ್ ವಿನೋದ್, ಮುಖಂಡರಾದ ಚಂದ್ರಶೇಖರ್, ರಮೇಶ್, ಮಂಜುಳಾ, ಪದ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.