ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗಮಕ ಕಲೆಯನ್ನು ಉಳಿಸಿ, ಬೆಳೆಸಬೇಕಿದೆ ಎಂದು ಸಾಹಿತಿ ಹಾಗೂ ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ತಿಳಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ‘ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜನ್ಮದಿನೋತ್ಸವ ಹಾಗೂ ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೊಡಗು ಜಿಲ್ಲೆಯಲ್ಲಿ ಹಿಂದೆ ಗೋಪಾಲಕೃಷ್ಣ ಅವರು ಗಮಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಮುಂದಿನ ದಿನಗಳಲ್ಲಿ ಗಮಕ ಕ್ಷೇತ್ರವನ್ನು ಉಳಿಸಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು’ ಎಂದು ಅವರು ಸಲಹೆ ನೀಡಿದರು.
ಕೊಡಗಿನ ಸಾಂಸ್ಕೃತಿಕ ಹಾಗೂ ಪಾರಂಪರಿಕ ಶ್ರೀಮಂತಿಕೆ ಹೊಂದಿರುವ ಬುಡಕಟ್ಟು ಜನಾಂಗಗಳ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಯಬೇಕು. ಸೈನಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರ ಬಗ್ಗೆಯೂ ಸಹ ಅಧ್ಯಯನ ಮಾಡಬೇಕು ಎಂದು ಅವರು ತಿಳಿಸಿದರು.
ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಮಿತಾ ಅಮೃತರಾಜ್, ‘ಕನ್ನಡ ಸಾಹಿತ್ಯ ಪರಿಷತ್ತು ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶಗಳು ದೊರೆಯಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ‘ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ತಮ್ಮ ಅಧಿಕಾರ ಅವಧಿಯಲ್ಲಿ ಕೃಷ್ಣರಾಜ ಸಾಗರ, ವಾಣಿ ವಿಲಾಸ ಸಾಗರ ಅಣೆಕಟ್ಟು ನಿರ್ಮಿಸಿ, ಕೃಷಿಕರ ಕಣ್ಮಣಿಯಾಗಿದ್ದಾರೆ’ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದಿಂದ ಸುಬ್ರಾಯ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯ ನೆರವನ ರೇವತಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾರಿಯಂಡ ಜೋಯಪ್ಪ, ಕಾವೇರಿ ಪ್ರಕಾಶ್, ಬೈತಡ್ಕ ಜಾನಕಿ, ಕಟ್ರತನ ಲಲಿತ ಅಯ್ಯಣ್ಣ, ಲೋಕನಾಥ ಅಮೆಚೂರು, ಪ್ರೇಮ ರಾಘವಯ್ಯ, ಸುನಿತಾ ಲೋಕೇಶ್, ಸುಂದರಿ ಮಾಚಯ್ಯ, ಸಹನಾ ಕಾಂತಬೈಲು, ಗೀತಾ, ನೀತು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಶಿಕ್ಷಣ ಇಲಾಖೆಯ ಕೃಷ್ಣಪ್ಪ, ವಿನೋದ್ ಮೂಡಗದ್ದೆ, ವಾಸು ರೈ ಭಾಗವಹಿಸಿದ್ದರು.
ಬೂಕರ್ ಪ್ರಶಸ್ತಿ ವಿಜೇತರಾದ ಮಡಿಕೇರಿಯ ದೀಪಾಭಾಸ್ತಿ ಅವರಿಗೆ ಜೂನ್ 9 ಅಥವಾ 10ರಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆಟಿ.ಪಿ.ರಮೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 40 ದತ್ತಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆಎಂ.ಪಿ.ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ.
‘ಇತರೆ ಭಾಷೆಗಳನ್ನು ಗೌರವಿಸಬೇಕು’
ಸಾಹಿತಿ ನಾಗೇಶ್ ಕಾಲೂರು ಮಾತನಾಡಿ ‘ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅವರವರ ಭಾಷೆಯನ್ನು ಪ್ರೀತಿಸಬೇಕು. ಗೌರವಿಸಬೇಕು. ಹಾಗೂ ಇತರ ಭಾಷೆಗಳನ್ನು ಸಹ ಗೌರವಿಸಬೇಕು. ಯಾರೂ ಸಹ ಸಣ್ಣತನ ಪ್ರದರ್ಶಿಸಬಾರದು’ ಎಂದು ಸಲಹೆ ನೀಡಿದರು. ಅವರವರ ಮಾತೃ ಭಾಷೆ ಅವರಿಗೆ ಹೃದಯ ಶ್ರೀಮಂತಿಕೆ ಭಾಷೆಯಾಗಿದೆ. ಆ ನಿಟ್ಟಿನಲ್ಲಿ ಮತ್ತೊಂದು ಭಾಷೆಯನ್ನು ಗೌರವಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.