ADVERTISEMENT

ಕೊಡಗು ರಕ್ಷಿಸಲು ಒಕ್ಕೊಲರ ಕರೆ

ವಿವಿಧ ಧರ್ಮಗುರುಗಳು ಭಾಗಿ, ಮಾನವಧರ್ಮ ಪಾಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 17:09 IST
Last Updated 18 ಸೆಪ್ಟೆಂಬರ್ 2022, 17:09 IST
ಕೊಡಗು ಬಚಾವೊ ವೇದಿಕೆ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಸರ್ವಜನಾಂಗದ ಶಾಂತಿಯ ತೋಟ’ ಜನಜಾಗೃತಿಯ ಸಮಾವೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು
ಕೊಡಗು ಬಚಾವೊ ವೇದಿಕೆ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಸರ್ವಜನಾಂಗದ ಶಾಂತಿಯ ತೋಟ’ ಜನಜಾಗೃತಿಯ ಸಮಾವೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು   

ಮಡಿಕೇರಿ: ಕೊಡಗು ಬಚಾವೊ ವೇದಿಕೆ ಇಲ್ಲಿನ ಕಾವೇರಿ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಸರ್ವಜನಾಂಗದ ಶಾಂತಿಯ ತೋಟ’ ಜನಜಾಗೃತಿಯ ಸಮಾವೇಶದಲ್ಲಿ ಸೌಹಾರ್ದತೆ, ಒಗ್ಗಟ್ಟು, ಸಾಮರಸ್ಯವನ್ನು ಧರ್ಮಾತೀತವಾಗಿ ಎಲ್ಲರೂ ಪ್ರತಿಪಾದಿಸಿದರು.

ವೇದಿಕೆಯ ಅಧ್ಯಕ್ಷರಾದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ‘ಜಿಲ್ಲೆಯ ಜನತೆ ಅನುಭವಿಸುತ್ತಿರುವ ಭೂಕುಸಿತ, ಬೆಳೆಹಾನಿ ಮೊದಲಾದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಬದಲಾವಣೆ ಅಗತ್ಯ’ ಎಂದು ಪ್ರತಿಪಾದಿಸಿದರು.

‘ಜಿಲ್ಲೆಯ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಸಮರ್ಥವಾಗಿ ಮಂಡಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. 25 ವರ್ಷಗಳಿಂದ ಇಬ್ಬರು ಜನಪ್ರತಿನಿಧಿಗಳು ಸತತವಾಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರೂ ಜನರ ಕನಿಷ್ಠ ಸಮಸ್ಯೆಗಳೂ ನೀಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಸುನ್ನಿ ಸೊಸೈಟಿ ಫೆಡರೇಷನ್ ಅಧ್ಯಕ್ಷ ಸಾಫೀ ಸಹೀದ್ ಮಾತನಾಡಿ, ‘ಜಿಲ್ಲೆಯನ್ನು ಧರ್ಮ ರಾಜಕಾರಣ ಮತ್ತು ಮತೀಯವಾದದಿಂದ ಪಾರು ಮಾಡಬೇಕಿದೆ. ಅಭಿವೃದ್ಧಿಪಥದತ್ತ ಕೊಂಡೊಯ್ಯವಲ್ಲಿ ವಿಫಲರಾಗಿರುವ ರಾಜಕಾರಣಿಗಳು ತಮ್ಮ ಅಧಿಕಾರಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿರುವುದು ಶೋಭೆ ತರುವಂತದ್ದಲ್ಲ. ದೇಶದ ಬಹುತ್ವದ ಇತಿಹಾಸ ಅರಿಯದ ಯುವಜನಾಂಗ ರಾಜಕಾರಣಿಗಳ ಪ್ರಚೋದನೆಗೆ ಒಳಗಾಗಿ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿಯಾದ ಮಾರ್ಗಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಸಂತ ಮೈಕಲರ ಚರ್ಚ್‌ನ ಧರ್ಮಗುರು ಜಾರ್ಜ್‌ ದೀಪಕ್‌ ಮಾತನಾಡಿ, ‘ನಮ್ಮಲ್ಲಿ ಎಲ್ಲ ಧರ್ಮಗಳಿವೆ. ಆದರೆ, ಮಾನವ ಧರ್ಮ ಮರೆಯಾಗಿದೆ. ಇದೇ ಎಲ್ಲ ಸಂಘರ್ಷಗಳಿಗೂ ಮೂಲಕಾರಣವಾಗಿದೆ’ ಎಂದು ತಿಳಿಸಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಧರ್ಮನಾಥಾನಂದ ಸ್ವಾಮೀಜಿ ಮಾತನಾಡಿ, ‘ಎಲ್ಲ ರಾಷ್ಟ್ರಗಳಲ್ಲಿಯೂ ಸಮಸ್ಯೆಗಳಿವೆ. ಆದರೆ, ಅವು ಧರ್ಮದಿಂದಾದ ಸಮಸ್ಯೆಗಳಲ್ಲ. ಬದಲಿಗೆ, ಧರ್ಮವನ್ನು ಅನುಸರಿಸದೇ ಇರುವುದೇ ಈ ’ ಸಮಸ್ಯೆಗಳಿಗೆ ಕಾರಣ. ಇದನ್ನು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಇಂತಹ ಮಹಾತ್ಮರ ನುಡಿಗಳನ್ನು ಕಡೆಗಣಿಸದೇ ಅದನ್ನು ಪಾಲಿಸುವಂತಾಗಬೇಕು’ ಎಂದರು.

ನಿವೃತ್ತ ಪ್ರಾಂಶುಪಾಲ ಜೆ.ಸೋಮಣ್ಣ ಪ್ರಧಾನ ಭಾಷಣ ಮಾಡಿದರು.

ಮಡಿಕೇರಿಯ ಶಾಂತಿ ಚರ್ಚ್‌ನ ಧರ್ಮಗುರು ಅಮೃತರಾಜ್, ಕೊಡ್ಲಿಪೇಟೆ ಎಸ್‌ಕೆಎಸ್‌ಎಸ್‌ಎಫ್ ಕ್ಯಾಂಪಸ್‌ ವಿಂಗ್‌ನ ಇಬ್ರಾಹಿಂ ಬಾತೀಷಾ ಶಂಸಿ, ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಶ್ರೀಧರ ಹೆಗಡೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಿವೃತ್ತ ಪ್ರಾಂಶುಪಾಲರಾದ ಗುಲಾಬಿ ಜನಾರ್ದನ್, ನಿವೃತ್ತ ಪೌರಾಯುಕ್ತರಾದ ಪುಷ್ಪಾವತಿ, ಮುಖಂಡ ಮೋಹನ್‌ ಮೌರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.