ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ಮೊಹಿಸಿನ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ಅವರು ನೀಡಿರುವ ಜಾತಿ ಜನಗಣತಿ ವರದಿಯನ್ನು ಏಕೆ ಸಚಿವ ಸಂಪುಟ ಅಂಗೀಕರಿಸಿ, ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಚರ್ಚೆಗೆ ಮಂಡಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿದ ಮುಸ್ಲಿಮರ ಶೇ 4ರ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸುವ ಬದ್ಧತೆ ಏನಾಯಿತು? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿರುವ ಭೂಹಿಡುವಳಿದಾರರಿಗೆ 25 ಎಕರೆವರೆಗೂ 30 ವರ್ಷಕ್ಕೆ ಗುತ್ತಿಗೆ ನೀಡಲು ಹೊರಡಿಸಿರುವ ಕರ್ನಾಟಕ ರಾಜ್ಯ ಪತ್ರವನ್ನು ರದ್ದುಗೊಳಿಸಿ ಭೂ ರಹಿತ ಬಡ ಕುಟುಂಬಗಳ ಸಮೀಕ್ಷೆ ನಡೆಸಿ ಹಕ್ಕುಪತ್ರ, ಪಹಣಿ ಹಾಗೂ ಆರ್ ಟಿ ಸಿ ನೀಡಲು ಮುಂದಾಗುವಿರಾ ಅಥವಾ ಭೂಹಿಡುವಳಿದಾರ ಬಲಾಢ್ಯ ಸಮಾಜದ ಪರವಾಗಿ ನಿಲ್ಲುವಿರಾ ಎಂದು ಅವರೂ ಕೇಳಿದ್ದಾರೆ.
ಇದರೊಂದಿಗೆ ಅವರು, ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಮುಗಿಯುವುದು ಯಾವಾಗ ಎಂದು ಪ್ರಶ್ನಿಸಿ, ಧೈರ್ಯ, ಸಮರ್ಥ, ಮಾತಿಗೆ ಬದ್ಧತೆ, ನುಡಿದಂತೆ ನಡೆಯುವ ವ್ಯಕ್ತಿತ್ವ ಇದ್ದ ಮೊದಲ ಅವಧಿಯಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಬದಲಾಗಿದ್ದಾರಾ ಎಂದು ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.