ಕುಶಾಲನಗರ: ಕೊಣನೂರು- ಶಿರಂಗಾಲ ಮುಖ್ಯ ರಸ್ತೆ ಬಳಿ ಗ್ರಾಮದೇವತೆ ಮಂಟಿಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಬಸವಾಪಟ್ಟಣ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ನಿರ್ಮಿಸಿರುವ ಮಹಾದ್ವಾರ ಹಾಗೂ ಗೋಪುರವನ್ನು ಸೋಮವಾರ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು.
ಆಶೀರ್ವಚನ ನೀಡಿದ ಸ್ವಾಮೀಜಿ, ‘ಬಸವಾಪಟ್ಟಣ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ಸುಮಾರು ₹ 16 ಲಕ್ಷ ವೆಚ್ಚದಲ್ಲಿ ಸುಂದರವಾದ ಮಹಾದ್ವಾರವನ್ನು ನಿರ್ಮಾಣ ಮಾಡಿದ್ದು, ಇದು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದೆ. ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಭಕ್ತರು ತಮ್ಮ ತನು ಧನ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ’ ಎಂದರು.
‘ಶಿರಂಗಾಲ ಗ್ರಾಮದ ದೇವತೆ ಮಂಟಿಗಮ್ಮ ದೇವಿಯ ಜಾತ್ರೋತ್ಸವ ಒಂದು ವಾರ ವಿಜೃಂಭಣೆಯಿಂದ ನಡೆಯಲಿದೆ. ಈ ಹಬ್ಬಕ್ಕೆ ಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು, ಹಾಸನ ಹಾಗೂ ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಜನರು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಜೊತೆಗೆ ಪ್ರತಿನಿತ್ಯ ದಾನಿಗಳಿಂದ ಅನ್ನದಾಸೋಹ ನಡೆಯುತ್ತದೆ. ನಾಡಿನ ಜನರಿಗೆ, ರೈತರಿಗೆ ತಾಯಿ ಒಳಿತು ಮಾಡಲಿ.ಮಳೆ ಬೆಳೆ ಸುಭಿಕ್ಷವಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ’ ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ಮಾತನಾಡಿ, ‘ಎರಡು ವರ್ಷಗಳಿಗೊಮ್ಮೆ (ಮಾರ್ಚ್ 14ರಿಂದ) ಗ್ರಾಮದೇವತೆ ಮಂಟಿಗಮ್ಮ ದೇವಿಯ ಹಬ್ಬ ನಡೆಯುತ್ತದೆ. ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ದಾನಿಗಳಿಂದ ದೇವಿ ಆರಾಧನೆ ಅದ್ದೂರಿಯಾಗಿ ನಡೆಯುತ್ತದೆ. ಇಂದು ಸ್ವಾಮೀಜಿ ನೇತೃತ್ವದಲ್ಲಿ ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಗಂಗೆಪೂಜೆ ಹಾಗೂ ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ದೇವಾಲಯದಲ್ಲಿ ಹೋಮಹವನ ನಡೆಯುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭ ದೇವಾಲಯ ಸಮಿತಿ ಗೌರವಾಧ್ಯಕ್ಷ ಎಸ್.ಆರ್.ಕಾಳಿಂಗಪ್ಪ,ಕಾರ್ಯದರ್ಶಿ ಎಂ.ಎಸ್.ಗಣೇಶ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಬಸವಣಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಎಸ್.ಬಸವರಾಜು, ದೇವಾಲಯ ಸಮಿತಿ ಅಧ್ಯಕ್ಷ ಜಯಪ್ರಕಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಮುಖಂಡರಾದ ಎಸ್.ವಿ.ಶಿವಾನಂದ, ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ರವಿ, ಧರಣೇಂದ್ರ ಕುಮಾರ್, ಸಿ.ಎನ್.ಲೋಕೇಶ್, ಎಸ್.ಎ.ಯೋಗೇಶ್, ಸಿ.ಎಲ್.ಲೋಕೇಶ್, ಚೇತನ್, ರಾಜಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.