ಪ್ರಜಾವಾಣಿ ವಾರ್ತೆ
ವಿರಾಜಪೇಟೆ: ಪಟ್ಟಣದ ಗೌರಿಕೆರೆಯಲ್ಲಿ ಭಾನುವಾರ ಉತ್ಸವಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಕಳೆದ 11 ದಿನಗಳಿಂದ ಪಟ್ಟಣದಲ್ಲಿ ನಡೆಯುತ್ತಿದ್ದ ಗೌರಿಗಣೇಶೋತ್ಸವಕ್ಕೆ ತೆರೆ ಎಳೆಯಲಾಯಿತು.
ಶನಿವಾರ ರಾತ್ರಿ ಆರಂಭವಾದ ಉತ್ಸವ ಮೂರ್ತಿಗಳ ಶೋಭಾಯಾತ್ರೆಯು ಭಾನುವಾರ ಮುಂಜಾನೆವರೆಗೂ ಮುಂದುವರೆದು ಬೆಳಿಗ್ಗೆ ಮೂರ್ತಿಗಳನ್ನು ಶ್ರದ್ಧಾ–ಭಕ್ತಿಯಿಂದ ವಿಸರ್ಜಿಸಲಾಯಿತು. ಪಟ್ಟಣದ 22 ಗೌರಿಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪ, ಪುಷ್ಪಾಲಂಕೃತ ಮಂಟಪದಲ್ಲಿ ಉತ್ಸವಮೂರ್ತಿಗಳನ್ನಿರಿಸಿ ವಾದ್ಯ ಹಾಗೂ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಲಾಗಿ ಮುನ್ನಡೆದವು.
ಕೆಲ ಸಮಿತಿಗಳು ಯುವ ಸಮುದಾಯವನ್ನು ಗಮನದಲ್ಲಿರಿಸಿ ಸಂಗೀತಕ್ಕೆ ಹೆಚ್ಚಿನ ಮನ್ನಣೆ ನೀಡಿದರೆ, ಇನ್ನುಳಿದ ಸಮಿತಿಗಳು ಸಂಸ್ಕೃತಿ, ಸಂಪ್ರದಾಯ ಪರಂಪರೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಾಂಪ್ರದಾಯಿಕ ವಾದ್ಯ ಸೇರಿದಂತೆ ಸಾಂಪ್ರದಾಯಿಕ ಕಲೆ ಹಾಗೂ ಕಲಾವಿದರಿಗೆ ಹೆಚ್ಚಿನ ಒತ್ತು ನೀಡಿದ್ದು ಕಂಡುಬಂತು. ಶೋಭಾಯಾತ್ರೆಯಲ್ಲಿ ಈ ಬಾರಿ ಪೇಪರ್ ಬ್ಲಾಸ್ಟ್ ಕಂಡು ಬರಲಿಲ್ಲ.
ವಿಶೇಷವಾಗಿ ಗೊಂಬೆಗಳು, ವಿದ್ಯುತ್ ದೀಪಾಲಂಕೃತ ದೈವದ ವಿವಿಧ ಅವತಾರಗಳು, ಸ್ಥಳೀಯ ವಾದ್ಯ ತಂಡಗಳು, ನಾಸಿಕ್ ಬ್ಯಾಂಡ್ ಸೆಟ್, ಸಿಡಿಮದ್ದಿನ ಪ್ರದರ್ಶನ ಸೇರಿದಂತೆ ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾ ತಂಡಗಳು ಗಮನ ಸೆಳೆದವು.
ಮೆರವಣಿಗೆಯುದ್ದಕ್ಕು ಯುವಸಮುದಾಯ ಸೇರಿದಂತೆ ಸಾರ್ವಜನಿಕರು ಸಂಗೀತಕ್ಕೆ ಮೈಮರೆತು ಉತ್ಸಾಹದಿಂದ ಕುಣಿದರು. ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಮಂದಿ ಶೋಭಾಯಾತ್ರೆಗೆ ಸಾಕ್ಷಿಯಾದರು. ರಾತ್ರಿ ಸುಮಾರು 10ರಿಂದ ಬೆಳಗಿನವರೆಗೆ ಪಟ್ಟಣದದ್ಯಾಂತ ವಿದ್ಯುತ್ ಕಡಿತ ಮಾಡಲಾಗಿತ್ತು. ಬೀದಿ ದೀಪವಿಲ್ಲದೆ ಸಾರ್ವಜನಿಕರಿಗೆ ಓಡಾಡಲು ಸಮಸ್ಯೆಯಾಗಿ ವಿದ್ಯುತ್ ಕಡಿತದ ಕುರಿತು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಕಳೆದ ಕೆಲವು ದಿನಗಳಿಂದ ಪಟ್ಟಣದ ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯು ಶನಿವಾರ ರಾತ್ರಿ ಶೋಭಾಯಾತ್ರೆಯ ಆರಂಭಕ್ಕೂ ಮುನ್ನ ಕೆಲಕಾಲ ಸುರಿಯಿತು. ಇದು ಕೊಂಚ ಆತಂಕಕ್ಕೂ ಕಾರಣವಾಯಿತಾದರೂ, ಬಳಿಕ ಮಳೆರಾಯ ಕರುಣೆತೋರಿ ರಾತ್ರಿಯಿಡಿ ಪಟ್ಟಣದತ್ತ ಮುಖಮಾಡದಿರುವುದು ಸಾರ್ವಜನಿಕರ ಉತ್ಸವವನ್ನು ಇಮ್ಮಡಿಗೊಳಿಸಿತು.
ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಸ್ಥಳೀಯ ಪೊಲೀಸರಲ್ಲದೆ, ಬಾಂಬ್ ನಿಷ್ಕ್ರಿಯ ಪಡೆ, ಜಿಲ್ಲಾ ಸಶಸ್ತ್ರ ಪಡೆ, ರಾಜ್ಯ ಮೀಸಲು ಪಡೆ ಸೇರಿದಂತೆ ಹಲವೆಡೆಗಳಿಂದ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.