ADVERTISEMENT

ಕೊಡಗಿನಿಂದ ಅಯೋಧ್ಯೆಗೆ ಮಣ್ಣು, ತೀರ್ಥ ರವಾನೆ

ಆ. 5ರಂದು ಶಿಲಾನ್ಯಾಸ, ಕಾವೇರಿ ಉಗಮ ಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ 

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:45 IST
Last Updated 23 ಜುಲೈ 2020, 12:45 IST
   

ಮಡಿಕೇರಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆ.5ರಂದು ಶಿಲಾನ್ಯಾಸ ನೆರವೇರಲಿದ್ದು ಕೊಡಗಿನಿಂದಲೂ ಗುರುವಾರ ಮಣ್ಣು ಹಾಗೂ ತೀರ್ಥ ರವಾನಿಸಲಾಯಿತು.

ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ವೇದಿಕೆಯ ಸಹಯೋಗದಲ್ಲಿ ಕೊಡಗಿನ ತಲಕಾವೇರಿ ಕ್ಷೇತ್ರದಲ್ಲಿ ಮೃತ್ತಿಕೆ ಸಂಗ್ರಹಿಸಿದ ಕಾರ್ಯಕರ್ತರು, ಅಯೋಧ್ಯೆಗೆ ರವಾನಿಸಿದರು. ಕಾವೇರಿ ತೀರ್ಥವನ್ನೂ ಕಳುಹಿಸಲಾಯಿತು.

ಇದೇ ವೇಳೆ ಜೀವನದಿ ಉಗಮ ಸ್ಥಳವಾದ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಮ ಮಂದಿರವು ನಿಗದಿತ ಅವಧಿಯಲ್ಲಿ ಯಾವುದೇ ಅಡ್ಡಿ, ಆತಂಕ ಎದುರಾಗದೇ ಪೂರ್ಣಗೊಳ್ಳಲಿ ಎಂದು ಪ್ರಾರ್ಥಿಸಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ ಮಾತನಾಡಿ, ‘ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗುತ್ತಿದೆ. ಎಲ್ಲರೂ ಒಟ್ಟಾಗಿ ರಾಮಮಂದಿರ ನಿರ್ಮಾಣಕ್ಕೆ ಕೊಡಗಿನ ಪುಣ್ಯಸ್ಥಳವಾದ ತಲಕಾವೇರಿಯಿಂದ ತೀರ್ಥ ಸಂಗ್ರಹಿಸಿ ಕಳುಹಿಸುತ್ತಿದ್ದೇವೆ’ ಎಂದರು.

‘ಭಕ್ತಿ, ಶ್ರದ್ಧೆಯಿಂದ ಕುಲದೇವರಿಗೆ ಪೂಜೆ ಸಲ್ಲಿಸಿದ್ದೇವೆ. ನಾವು 1992ರಲ್ಲಿ ಅಯೋಧ್ಯೆಗೆ ಹೋಗಿದ್ದೆವು. ಅಂದು ಹೋಗಿದ್ದಕ್ಕೆ ಇಂದು ಸಾರ್ಥಕವಾಗಿದೆ’ ಎಂದು ಹೇಳಿದರು.

ಮುಖಂಡ ಚಕ್ಕೇರ ಮನು ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಚಾರ. ಬಹಳ ವರ್ಷಗಳ ನಮ್ಮ ಬೇಡಿಕೆಯಾಗಿತ್ತು’ ಎಂದು ತಿಳಿಸಿದರು.

ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಮಾತನಾಡಿ, ‘ಅಯೋಧ್ಯೆ ಮಂದಿರದ ನಿರ್ಮಾಣಕ್ಕೆ ಪಣತೊಟ್ಟು ಹಲವರ ಹೋರಾಟಕ್ಕೆ ನ್ಯಾಯ ದೊರಕಿದೆ. ಆ.5ರಂದು ಅಯೋಧ್ಯೆ ರಾಮ ಮಂದಿರದ ಶಿಲಾನ್ಯಾಸ ನೆರವೇರಲಿದ್ದು ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸೋಣ’ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ ಮುಖಂಡ ಚಿ.ನಾ.ಸೋಮೇಶ್, ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್, ವಿಶ್ವ ಹಿಂದೂ ಪರಿಷತ್‌ ತಾಲ್ಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಬಜರಂಗದಳದ ಜಿಲ್ಲಾ ವಿದ್ಯಾರ್ಥಿ ಪ್ರಮುಖ ವಿನಯ್ ಕುಮಾರ್, ನಾಗೇಶ್, ರಾಜೀವ್, ಚರಣ್, ಸತ್ಯ, ರವಿ ಹಾಜರಿದ್ದರು.

**
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು ಎಂಬ ಕನಸು ಬಹಳ ವರ್ಷಗಳದ್ದು. ಅದು ಈಗ ಈಡೇರುವ ಕಾಲ ಸಮೀಪಿಸಿದೆ.
–ಚಕ್ಕೇರ ಮನು, ಮುಖಂಡ

**
ಕಾವೇರಿ ಉಗಮ ಸ್ಥಳದಲ್ಲಿ ಕೆಲವು ಸಂಘಟನೆಯ ಮುಖಂಡರು ಗುರುವಾರ ಪೂಜೆ ಸಲ್ಲಿಸಿದ್ದಾರೆ. ತೀರ್ಥವನ್ನೂ ಸಂಗ್ರಹಿಸಿದ್ದಾರೆ
–ನಾರಾಯಣ ಆಚಾರ್ಯ, ಪ್ರಧಾನ ಅರ್ಚಕ, ತಲಕಾವೇರಿ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.