ಸೋಮವಾರಪೇಟೆ: ಜಿಲ್ಲೆಯಲ್ಲಿ ಹಲವು ಕೃಷಿಕರ ಮೇಲೆ ತೂಗುಕತ್ತಿಯಂತಿರುವ ಸಿ ಮತ್ತು ಡಿ ಜಾಗ ಹಾಗೂ ಸೆಕ್ಷನ್-4 ಸಮಸ್ಯೆಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲಿರುವ ತಾಲ್ಲೂಕು ರೈತ ಹೋರಾಟ ಸಮಿತಿ ಶಾಶ್ವತ ಪರಿಹಾರ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದೆ.
ಸೋಮವಾರ ಇಲ್ಲಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚರ್ಕವರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚಿಸಲಾಯಿತು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಎರಡು ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ರೈತರಿಗೆ ಸೆಕ್ಷನ್-4 ವಿಚಾರದಲ್ಲಿ ನೋಟಿಸ್‌ಗಳು ಬರುತ್ತಲೇ ಇವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುವುದನ್ನು ನಿಲ್ಲಿಸಿಲ್ಲ. ಹೀಗಾಗಿ, ಹೋರಾಟದ ತೀವ್ರತೆಯನ್ನು ಹೆಚ್ಚಿಸಲೇಬೇಕಿದೆ’ ಎಂದು ಸಭೆಯಲ್ಲಿದ್ದ ಕೃಷಿಕರು ಅಭಿಪ್ರಾಯಿಸಿದರು.
ಸರ್ಕಾರದ ಸಿ ಮತ್ತು ಡಿ ಹಾಗೂ ಸೆಕ್ಷನ್ 4ನ್ನು ತೆರವುಗೊಳಿಸಬೇಕೆಂಬ ಉದ್ದೇಶದಿಂದ ತಾಲ್ಲೂಕಿನ ರೈತ ಹೋರಾಟ ಸಮಿತಿಯಿಂದ ಹಲವು ಶಾಂತಿಯುತ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೆ, ಈವರೆಗೆ ಯಾವುದೇ ಸೆಕ್ಷನ್‌ಗಳನ್ನು ತೆರವುಗೊಳಿಸಿಲ್ಲ ಎಂದು ಸುರೇಶ್ ತಿಳಿಸಿದರು.
‘ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡುವ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಸೆಕ್ಷನ್–4 ಹೆಸರಿನಲ್ಲಿ ಏಕಾಏಕಿ ರೈತರ ಜಮೀನನ್ನು ಸರ್ವೆ ಮಾಡಲಾಗುತ್ತಿದೆ. ಇತ್ತೀಚಿಗೆ ತಾಲ್ಲೂಕಿನ ಕಲ್ಕಂದೂರು, ಹರಗ, ತೋಳೂರುಶೆಟ್ಟಳ್ಳಿ, ಕೂತಿ ವ್ಯಾಪ್ತಿಯಲ್ಲಿ ಜಾಗವನ್ನು ತೆರವುಗೊಳಿಸಲು ನೋಟಿಸ್ ನೀಡಿ, ಅರಣ್ಯ ಇಲಾಖೆ ತೆರವುಗೊಳಿಸಲು ಮುಂದಾಗಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದರು.
ತಕ್ಷಣದಿಂದಲೇ ಸಿ ಮತ್ತು ಡಿ, ಸೆಕ್ಷನ್ 4 aನ್ನು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಆರಂಭಿಕ ಹಂತವಾಗಿ ತಾಲ್ಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುವುದು, ಎಲ್ಲಾ ಗ್ರಾಮಗಳಿಂದಲೂ ರೈತರು ಆಗಮಿಸಿ, ಹೋರಾಟ ತೀವ್ರಗೊಳಿಸುವುದು, ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು ಆಗಮಿಸುವವರೆಗೂ ಹೋರಾಟ ಮುಂದುವರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್, ಕಾರ್ಯದರ್ಶಿ ದಿವಾಕರ್ ಕೂತಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ, ಪ್ರಮುಖರಾದ ನಾಪಂಡ ಮುತ್ತಪ್ಪ, ರೈತ ಹೋರಾಟ ಸಮಿತಿಯ ಕೆ. ಎಂ. ಲೋಕೇಶ್, ಬಗ್ಗನ ಅನಿಲ್, ಮಿಥುನ್ ಹರಗ, ಗೌಡಳ್ಳಿ ಪ್ರಸಿ, ಪೃಥ್ವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.