ADVERTISEMENT

ಜನಮನ ರಂಜಿಸಿದ ಸಂಗೀತ ರಸಸಂಜೆ ಕಾರ್ಯಕ್ರಮ

ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:13 IST
Last Updated 3 ಅಕ್ಟೋಬರ್ 2025, 5:13 IST
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಆಯುಧಪೂಜಾ ಸಮಾರೋಪ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. 
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಆಯುಧಪೂಜಾ ಸಮಾರೋಪ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.    

ಸೋಮವಾರಪೇಟೆ: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಆಯುಧ ಪೂಜೋತ್ಸವದ ಸಮಾರೋಪ ಪ್ರಯುಕ್ತ ಚಲನಚಿತ್ರ ಹಿನ್ನೆಲೆ ಗಾಯಕ ಗುರುಕಿರಣ್ ನೇತೃತ್ವದಲ್ಲಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ಮನರಂಜಿಸಿತು.

ಬುಧವಾರ ಸಂಜೆ ಆಯುಧ ಪೂಜಾ ಕಾರ್ಯಕ್ರಮ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿನ ಬೃಹತ್ ವೇದಿಕೆಯಲ್ಲಿ ನಡೆಯಿತು. ಸಮಾರೋಪ ಸಮಾರಂಭದ ನಂತರ ರಸಸಂಜೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಗೀತ ನಿರ್ದೇಶಕ, ಗಾಯಕ ಹಾಗೂ ನಟ ಗುರುಕಿರಣ್ ಸೇರಿದಂತೆ ಹೆಸರಾಂತ ಹಿನ್ನೆಲೆ ಗಾಯಕರಾದ ಅನುರಾಧ ಭಟ್, ಚೈತ್ರ, ಗಣೇಶ್ ಕಾರಂತ್ ಅವರುಗಳು ಹಾಡಿನ ಮೋಡಿ ಮಾಡಿದರೆ, ನಿರೂಪಕಿ ಅನುಪಮಾ ಭಟ್ ಜನರನ್ನು ರಂಜಿಸಿದರು.

ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಮಂಗಳವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಪ್ರತಿ ವರ್ಷ ಅದ್ದೂರಿಯಾಗಿ ಆಯುಧ ಪೂಜೋತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಲ್ಲಿ ಕೇವಲ ಒಂದು ದಿನಕ್ಕೆ ಕಾರ್ಯಕ್ರಮಗಳು ಸೀಮಿತವಾಗಬಾರದು. ಎಲ್ಲ ಸಂಘ ಸಂಸ್ಥೆಗಳೊಂದಿಗೆ ದಸರಾ ಮಾದರಿಯಲ್ಲಿ 9 ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದರು.

ADVERTISEMENT

ಇದರೊಂದಿಗೆ ಸಂಘದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಚಾಲಕರು ತಮ್ಮ ವೃತ್ತಿಯಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು. ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು. ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕೆಂದು ಕಿವಿಮಾತು ನುಡಿದರು.

ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಸೋಮವಾರಪೇಟೆಯಲ್ಲಿ ವರ್ಷಕ್ಕೊಮ್ಮೆ ಜನೋತ್ಸವವಾಗಿ ನಡೆಯುವ ಆಯುಧ ಪೂಜೋತ್ಸವಕ್ಕೆ ಸರ್ಕಾರದಿಂದ ಕನಿಷ್ಠ ₹ 50 ಲಕ್ಷ ಅನುದಾನ ಒದಗಿಸಲು ಶಾಸಕರು ಮುಂದಾಗಬೇಕೆಂದು ಮನವಿ ಮಾಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಸೋಮವಾರಪೇಟೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ವಿಎಸ್ಎಸ್ಎನ್ ಉಪಾಧ್ಯಕ್ಷ ಹುಲ್ಲೂರಿಕೊಪ್ಪ ಚಂದ್ರು, ನಿರ್ದೇಶಕ ಕರ್ಕಳ್ಳಿ ಸುಭಾಷ್, ಗೌಡಳ್ಳಿ ವಿಎಸ್ಎಸ್ಎನ್ ನಿರ್ದೇಶಕ ಹೆಚ್.ಆರ್. ಸುರೇಶ್, ಚೌಡ್ಲು ಗ್ರಾ.ಪಂ. ಉಪಾಧ್ಯಕ್ಷ ನತೀಶ್ ಮಂದಣ್ಣ, ಉದ್ಯಮಿ ಎನ್.ಎಸ್. ಜಯರಾಂ, ಎನ್.ಎಸ್. ಶ್ರೀನಿವಾಸ್, ಗುತ್ತಿಗೆದಾರ ಚೌಡ್ಲು ಚೇತನ್, ಸೂಡಾ ಅಧ್ಯಕ್ಷ ಕೆ.ಎ. ಆದಂ, ಪ.ಪಂ. ಸದಸ್ಯ ಕಿರಣ್ ಉದಯಶಂಕರ್, ಜೇಸಿ ಮಾಜಿ ಅಧ್ಯಕ್ಷ ಎಸ್.ಆರ್. ವಸಂತ್ ಇದ್ದರು.

ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಆಯುಧಪೂಜಾ ಸಮಾರೋಪ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಅನುರಾಧ ಭಟ್ ಹಾಡುವ ಮೂಲಕ ಜನರನ್ನು ರಂಜಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.