ಸೋಮವಾರಪೇಟೆ: ತಾಲ್ಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸೋಮವಾರ ಬೆಳಿಗ್ಗೆ ಶಾಲೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ಪಾರ್ಕ್ಸ್ ಲೈಟ್ ಹೊತ್ತಿಸಿ ಸ್ವಾಗತಿಸಲಾಯಿತು. ನಂತರ ಶಾಲಾ ತರಗತಿಗಳಿಗೆ ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಡ್ವೆಂಚರ್ ಸ್ಪೋರ್ಟ್ ನಲ್ಲಿ ಒಂದಾದ ಜಿಪ್ ಲೈನ್ ರೋಪ್ ಮೂಲಕ ತರಗತಿಗಳಿಗೆ ಬಂದಿಳಿಯುವ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 20 ಅಡಿ ಎತ್ತರದ ಜಿಪ್ ಲೈನ್ ರೋಪ್ ನಲ್ಲಿ 100 ಅಡಿ ದೂರ ಕ್ರಮಿಸುವ ಮೂಲಕ ವಿದ್ಯಾರ್ಥಿಗಳು ಸಾಹಸ ಮೆರೆದರು. ಈ ಸಂದರ್ಭ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮುಖ್ಯ ಶಿಕ್ಷಕ ಸತೀಶ್ ಶೇಡ್ ನೆಟ್ ಬಳಸಿ ಮಕ್ಕಳಲ್ಲಿ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಮೂಡುವಂತೆ ಉತ್ತಮವಾಗಿ ಕ್ರೀಡೆಯನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳು ಈ ಒಂದು ಕಾರ್ಯಕ್ರಮದಲ್ಲಿ ಉತ್ಸುಕರಾಗಿ ಭಾಗವಹಿಸಿ ಸಂಭ್ರಮಿಸಿದರು.
ಈ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಸತೀಶ್ ಮಾತನಾಢಿ, ಸಾಹಸ ಕ್ರೀಡೆಗಳಲ್ಲಿ ನಿಯಂತ್ರಿತ ಅಪಾಯವನ್ನು ಒಳಗೊಂಡಿರುವುದರಿಂದ, ಮಕ್ಕಳಿಗೆ ಜೀವನದ ಅಪಾಯಗಳನ್ನು ಯಾವ ರೀತಿಯಲ್ಲಿ ಸುರಕ್ಷಿತವಾಗಿ ನಿಭಾಯಿಸಬೇಕು ಎಂಬ ಉದ್ದೇಶದಿಂದ ಆಯೋಜನೆ ಮಾಡಲಾಗಿದೆ. ಇಂತಹ ಸಾಹಸ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸೈನ್ಯಕ್ಕೆ ಸೇರುವ ಹಂಬಲವನ್ನು ಹೆಚ್ಚಿಸುತ್ತದೆ. ಅಲ್ಲದೆ, ಅವರಲ್ಲಿ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸಾಹಸ ಕ್ರೀಡೆಗಳು ಒಂದು ಶ್ರೇಷ್ಠ ಸಾಧನವಾಗುತ್ತವೆ. ಶಾಲೆಗಳು ಇಂತಹ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು, ಇದರಿಂದ ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ, ಆರೋಗ್ಯ ಮತ್ತು ಮಾನಸಿಕ ಶಕ್ತಿಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಶಿಕ್ಷಕರಾದ ಜಾನ್‌ಪಾವ್ಲ್ ಡಿಸೋಜ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಯಾವೆಲ್ಲ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಹೋಗಬೇಕು, ಕಲಿಕೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಪಂಕಜ, ಶಿಕ್ಷಕಿ ಶೀಲಾ ಹಾಗೂ ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.