ADVERTISEMENT

ಅರಣ್ಯ ಇಲಾಖೆಗೆ ಭೂಮಿ ಹಸ್ತಾಂತರಿಸದಂತೆ ಪ್ರತಿಭಟನೆ: ಸೋಮವಾರಪೇಟೆ ಸ್ತಬ್ಧ

ಶನಿವಾರಸಂತೆಯಲ್ಲಿ ಮಾನವ ಸರಪಳಿ ರಚನೆ, ತಾಲ್ಲೂಕಿನ ಎಲ್ಲೆಡೆ ಮುಚ್ಚಿದ ಅಂಗಡಿ ಮುಂಗಟ್ಟುಗಳು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:04 IST
Last Updated 13 ಆಗಸ್ಟ್ 2025, 4:04 IST
ಸೋಮವಾರಪೇಟೆ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು
ಸೋಮವಾರಪೇಟೆ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು   

ಸೋಮವಾರಪೇಟೆ: ‘ಸಿ’ ಮತ್ತು ‘ಡಿ’ ದರ್ಜೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬಾರದು ಹಾಗೂ ಈ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತ ಹೋರಾಟ ಸಮಿತಿ ಮತ್ತು ರೈತ ಸಂಘ ಮಂಗಳವಾರ ಕರೆ ನೀಡಿದ್ದ ತಾಲ್ಲೂಕು ಬಂದ್ ಯಶಸ್ವಿಯಾಯಿತು.

ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬ್ಯಾಂಕ್ ಸೇರಿ ಕೆಲವು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿಲ್ಲ. ಒಂದೆರಡು ಖಾಸಗಿ ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳು ಒಂದು ದಿನ ಮೊದಲೇ ರಜೆ ಘೋಷಣೆ ಮಾಡಿದ್ದವು. ಸರ್ಕಾರಿ ಶಾಲೆಗಳು ಎಂದಿನಂತೆ ತೆರೆದಿದ್ದರೂ ವಾಹನ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಶಾಲೆಯತ್ತ ಸುಳಿಯಲಿಲ್ಲ. ಪಟ್ಟಣದ ಚನ್ನಬಸಪ್ಪ ಸಭಾಂಗಣ, ವಿವೇಕಾನಂದ ವೃತ್ತ ಹಾಗೂ ಬಾಣಾವಾರ ರಸ್ತೆಯಲ್ಲಿ ಪ್ರತಿಭಟನಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವಿವೇಕಾನಂದ ವೃತ್ತದ ಬಳಿಯಲ್ಲಿ ಸೇರಿದ್ದ ನೂರಾರು ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೃಷ್ಣಮೂರ್ತಿ ಮತ್ತು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ ಅವರನ್ನು ಸುತ್ತುವರೆದ ಹೋರಾಟಗಾರರು ‘ಸಿ’ ಮತ್ತು ‘ಡಿ’ ಜಾಗಕ್ಕೆ ಸಂಬಂಧಿಸಿ ವಾಗ್ವಾದ ನಡೆಸಿದರು.

ADVERTISEMENT

ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ರೈತರು ಹಲವು ದಶಕಗಳಿಂದ ಕೃಷಿ ಮಾಡಿಕೊಂಡಿರುವ ‘ಸಿ’ ಮತ್ತು ‘ಡಿ’ ಜಾಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅರಣ್ಯ ಇಲಾಖೆಯವರು ಕೃಷಿ ಭೂಮಿಯನ್ನೇ ‘ಸಿ’ ಮತ್ತು ‘ಡಿ’ ಎಂದು ಸೆಕ್ಷನ್ -4ರ ಸರ್ವೆಗೆ ಮುಂದಾಗಿದ್ದಾರೆ. ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.

ರೈತ ಹೋರಾಟ ಸಮಿತಿಯ ಬಿ.ಜೆ.ದೀಪಕ್, ಮಿಥನ್ ಹರಗ, ಬಗ್ಗನ ಅನಿಲ್, ದಿವಾಕರ್ ಕೂತಿ, ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಮಾಜಿ ಶಾಸಕ ಅಪ್ಪಚ್ಚುರಂಜನ್, ಎಸ್.ಜಿ.ಮೇದಪ್ಪ, ಕೆ.ಎಂ.ಲೋಕೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗರಾಜು ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತಾಲ್ಲೂಕಿನ ವಿವಿಧೆಡೆ ಬಂದ್ ಯಶಸ್ವಿ

ಸೋಮವಾರಪೇಟೆ –ಮಡಿಕೇರಿ ರಸ್ತೆಯ ಮಾದಾಪುರ ಮತ್ತು ಹಟ್ಟಿಹೊಳೆಯಲ್ಲಿ ಪ್ರತಿಭಟನಕಾರರು ರಸ್ತೆ ಬಂದ್ ಮಾಡುವ ಮೂಲಕ ವಾಹನ ಸಂಚಾರ ತಡೆದರು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೃಷಿ ಪತ್ತಿನ ಸಹಕಾರ ಸಂಘ, ಕೆನರಾ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ರಜೆ ಘೋಷಣೆ ಮಾಡಿದ್ದವು.

ಸೋಮವಾರಪೇಟೆಯಿಂದ ಹಾಸನಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಚೌಡ್ಲು, ಕಾಗಡಿಕಟ್ಟೆ, ದೊಡ್ಡಮಳ್ತೆ, ಬಿಟಿಕಟ್ಟೆ, ಗೌಡಳ್ಳಿಯಲ್ಲಿ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು. ಕಾಗಡಿ ಕಟ್ಟೆಯಲ್ಲಿ ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸೋಮವಾರಪೇಟೆಯಿಂದ ಕೊಣನೂರಿಗೆ ತೆರಳುವ ಬಾಣಾವಾರ, ಅಬ್ಬೂರುಕಟ್ಟೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸೋಮವಾರಪೇಟೆಯಿಂದ ಕೂಡು ರಸ್ತೆ ಮೂಲಕ ಸಕಲೇಶಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಕೂಡುರಸ್ತೆ, ಶಾಂತಳ್ಳಿ, ತೋಳುರುಶೆಟ್ಟಳ್ಳಿ, ತಲ್ತಾರೆಶೆಟ್ಟಳ್ಳಿ ಸೇರಿ ಹಲವೆಡೆ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ‌

ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರವನ್ನು ಕೆಡವಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ಮಧ್ಯಾಹ್ನದ ನಂತರ ಅದನ್ನು ತೆರವುಗೊಳಿಸಿ ವಾಹನಗಳಿಗೆ ಅವಕಾಶ ಮಾಡಿಕೊಟ್ಟರು.

ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲಿ ವಾಹನ ಸಂಚಾರ ತಡೆದರು

ಜಿಲ್ಲಾಧಿಕಾರಿ ಭೇಟಿ

ಸೋಮವಾರಪೇಟೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ‘ವ್ಯಕ್ತಿಯೊಬ್ಬರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು ಹಾರಂಗಿಯಲ್ಲಿ ಮುಳುಗಡೆಯಾದ ಭೂಮಿಗೆ 3 ಪಟ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕಿರುವುದರಿಂದ ನ್ಯಾಯಾಲಯದ ಅದೇಶ ಹಾಗೂ ಸರ್ಕಾರದ ಸೂಚನೆಯಂತೆ ಕೆಲಸ ಮಾಡಲಾಗುತ್ತಿದೆ. ‘ಡೀಮ್ದ್’ ಅರಣ್ಯ ಪ್ರದೇಶದಲ್ಲಿ ರೈತರ ಮನೆ ಮತ್ತು ಕೃಷಿ ಮಾಡುತ್ತಿರುವ ಭೂಮಿ ಹೊರತುಪಡಿಸಿದಂತೆ ಸರ್ವೆ ಮಾಡಲಾಗುತ್ತಿದೆ. ಹೊರ ಜಿಲ್ಲೆಗಿಂತಲೂ ಕೊಡಗಿನಲ್ಲಿ ವ್ಯವಸ್ಥಿತವಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಸರ್ವೆ ಮುಗಿದ ನಂತರ ಸಾರ್ವಜನಿಕರ ಮುಂದೆ ಇಡಲಾಗುವುದು’ ಎಂದರು. ‘ಸಿ’ ಮತ್ತು ‘ಡಿ’ ಭೂಮಿಗೆ ಸಂಬಂಧಿಸಿ ಕಂದಾಯ ಇಲಾಖೆ ಮಾತ್ರ ಸರ್ವೆ ಮಾಡುವುದಿಲ್ಲ. ಅರಣ್ಯ ಇಲಾಖೆ ಮತ್ತು ರೈತರನ್ನು ಸೇರಿಸಿ ಸಮಿತಿ ರಚನೆ ಮಾಡಿ ಮೊದಲೇ ಮಾಹಿತಿ ನೀಡಿ ಸರ್ವೆ ನಡೆಸಲಾಗುವುದು. ಎಲ್ಲ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.

ಶನಿವಾರಸಂತೆ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ

ಶನಿವಾರಸಂತೆ: ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ಸೋಮವಾರಪೇಟೆ ತಾಲ್ಲೂಕು ಬಂದ್‍ಗೆ ಶನಿವಾರಸಂತೆ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರೈತ ಹೋರಾಟ ಸಮಿತಿ ಪ್ರಮುಖರು ರೈತರು ವರ್ತಕರ ಸಂಘದ ಪ್ರಮುಖರು ಸಾರ್ವಜನಿಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಇದಕ್ಕೂ ಮೊದಲು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಇಲಾಖೆ ಸಿಬ್ಬಂದಿಯಿಂದಲೆ ಕಚೇರಿಗೆ ಬೀಗ ಹಾಕಿಸಿ ಪ್ರತಿಭಟನೆ ನಡೆಸಿದರು. ಹೊಟೇಲ್ ಕ್ಯಾಂಟೀನ್ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ಸ್ವಯಂಪ್ರೇರಿತರಾಗಿ ಬಂದ್‍ಗೆ ಸಹಕಾರ ನೀಡಿದರು. ಸರ್ಕಾರಿ ಶಾಲೆ ಸರ್ಕಾರಿ ಕಚೇರಿ ಆಸ್ಪತ್ರೆ ಹೊರತುಪಡಿಸಿ ಖಾಸಗಿ ಶಾಲಾ ಕಾಲೇಜು ಖಾಸಗಿ ಸಂಸ್ಥೆಗಳು ಕಾರ್ಯನಿವರ್ಹಿಸದೆ ಬಂದ್‍ಗೆ ಸಹಕರಿಸಿದವು. ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.

ಶನಿವಾರಸಂತೆಯಿಂದ ಅರಕಲಗೂಡು ಹಾಸನ ಕಡೆಗೆ ಹೋಗುವ ರಸ್ತೆ ಸಾರಿಗೆ ಬಸ್‌ಸಂಚಾರ ಎಂದಿನಂತೆ ಇತ್ತು. ಆದರೆ ಸೋಮವಾರಪೇಟೆ ಕುಶಾಲನಗರ ಕಡೆಗೆ ಹೋಗುವ ರಸ್ತೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತು. ಗೋಪಾಲಪುರ ಮತ್ತು ಗುಡುಗಳಲೆ ಜಂಕ್ಷನ್‍ಗಳು ಬಿಕೊ ಎನ್ನಿತ್ತಿದ್ದವು.

ರೈತ ಹೋರಾಟ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಅನಂತ್‍ಕುಮಾರ್‌ ‘ಪ್ರತಿ ರೈತರಿಗೂ ಅನ್ಯಾಯವಾಗುತ್ತಿರುವುದರಿಂದ ಬಂದ್ ನಡೆಸಲಾಗುತ್ತಿದೆ’ ಎಂದರು.

ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎನ್.ರಘು ಮಾತನಾಡಿ ‘ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆ ಸುಖಾಸುಮ್ಮನೆ ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದೆ’ ಎಂದು ದೂರಿದರು.

ವರ್ತಕರ ಸಂಘದ ನಿರ್ದೇಶಕ ಸಿ.ಎಸ್.ಗಿರೀಶ್ ಪ್ರಮುಖರಾದ ರಕ್ಷಿತ್ ಭರತ್ ವಿನೋದ್ ಪುನಿತ್ ತಾಳೂರು ದಿವಾಕರ್. ಸುರೇಶ್ ಕೇಶವಮೂರ್ತಿ ಸರ್ದಾರ್ ಆಹಮ್ಮದ್ ವೀರೇಂದ್ರಕುಮಾರ್ ಪ್ರಶಾಂತ್ ಸೇರಿದಂತೆ ರೈತರು ಗ್ರಾಮಸ್ಥರು ಸಾರ್ವಜನಿಕರು ಪಾಲ್ಗೊಂಡಿದ್ದರು.

ಸೋಮವಾರಪೇಟೆ ಕಾಗಡಿಕಟ್ಟೆ ಗ್ರಾಮದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲೇ ಅಡುಗೆ ಮಾಡಿ ರಸ್ತೆ ತಡೆ ನಡೆಸಿದರು

ಕೊಡ್ಲಿಪೇಟೆ ಭಾಗದಲ್ಲಿ ಅಭೂತಪೂರ್ವ ಬೆಂಬಲ

ಶನಿವಾರಸಂತೆ: ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ಕರೆ ನೀಡಿದ್ದ ತಾಲ್ಲೂಕು ಬಂದ್‍ಗೆ ಕೊಡ್ಲಿಪೇಟೆ ಮತ್ತು ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ವರ್ತಕರು ಸ್ವಯಂಪ್ರೇರಿತರಗಿ ಹೊಟೇಲ್ ಕ್ಯಾಂಟೀನು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಹಕಾರ ನೀಡಿದರು.

ಕೊಡ್ಲಿಪೇಟೆ ವರ್ತಕರ ಸಂಘ ಕರ್ನಾಟಕ ರಕ್ಷಣ ವೇದಿಕೆ ರೈತ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ಮಂಗಳವಾರ ನಡೆದ ತಾಲ್ಲೂಕು ಬಂದ್‍ಗೆ ಬೆಂಬಲ ನೀಡಿದರು. ಅರಕಲಗೂಡು ಸಕಲೇಶಪುರ ಹಾಸನ ಕಡೆಗೆ ಸಂಚರಿಸುವ ರಸ್ತೆ ಸಾರಿಗೆ ಬಸ್ ಹೊರತುಪಡಿಸಿದಂತೆ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತು. ವರ್ತಕರ ಸಂಘದ ಯತೀಶ್‍ಕುಮರ್ ಪ್ರಮುಖರಾದ ಕೆ.ಆರ್.ಚಂದ್ರಶೇಖರ್ ಶಿವಕುಮಾರ್ ಭಗವಾನ್ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.

ಆಲೂರು ಸಿದ್ದಾಪುರದಲ್ಲೂ ಬೆಂಬಲ: ಆಲೂರುಸಿದ್ದಾಪುರ ರೈತ ಹೋರಾಟ ಸಮಿತಿ ವಿವಿಧ ಸಂಘ ಸಂಸ್ಥೆಗಳು ರೈತರು ಮತ್ತು ಸಾರ್ವಜನಿಕರು ಮಂಗಳವಾರ ನಡೆದ ತಾಲ್ಲೂಕು ಬಂದ್‍ಗೆ ಬೆಂಬಲ ನೀಡಿದರು.

ರೈತ ಹೋರಾಟಗಾರರು ಗ್ರಾಮದ ಜಂಕ್ಷನ್‍ನಲ್ಲಿ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಚಾರ ಮಾಡುತ್ತಿದ್ದ ಖಾಸಗಿ ವಾಹನಗಳನ್ನು ತಡೆದು ನಂತರ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಗ್ರಾಮದ ಜಂಕ್ಷನ್‍ನಲ್ಲಿ ಸಭೆ ಸೇರಿದ ರೈತ ಹೋರಾಟಗಾರರು ಅರಣ್ಯ ಇಲಾಖೆಯ ನಿಲುವನ್ನು ಖಂಡಿಸಿದರು. ಮನವಿ ಪತ್ರವನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿದರು.

ಈ ವೇಳೆ ಮುಖಂಡರಾದ ಎಸ್.ಜೆ.ಪ್ರಸನ್ನ ಕೆ.ವಿ.ಜಯಕುಮಾರ್ ಸತೀಶ್‍ಕುಮಾರ್ ಎ.ಜಿ.ವಿಜಯ್ ಕಿರಣ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ‌ಲ್ಲಿ ಪ್ರತಿಭಟನಕಾರರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.