
ಸೋಮವಾರಪೇಟೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಲಜಾ ಶೇಖರ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ವಿಜೇತ್, ಜ್ಯೋತಿ, ವೀರರಾಜು, ಶೇಖರ್, ತಿಮ್ಮಶೆಟ್ಟಿ, ಸುಮಾ ಪಾಲ್ಗೊಂಡಿದ್ದರು
ಸೋಮವಾರಪೇಟೆ: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ.9ರಂದು ನಡೆಯುವ 9ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಜಲಜಾ ಶೇಖರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿ, ‘ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ವೇದಿಕೆಯಾಗಿದ್ದು, ಜಲಜಾ ಶೇಖರ್ ಅವರಂತಹ ಅನುಭವಿ ಸಾಹಿತಿಯ ಸರ್ವಾಧ್ಯಕ್ಷತೆ ಸಮ್ಮೇಳನಕ್ಕೆ ವಿಶೇಷ ಘನತೆ ತರುತ್ತದೆ’ ಎಂದು ಹೇಳಿದರು.
ಜಲಜಾ ಶೇಖರ್ ಮಾತನಾಡಿ, ‘ತಾಲ್ಲೂಕು ಸಾಹಿತ್ಯ ಸಮ್ಮೇಳನ ಕೇವಲ ಕಾರ್ಯಕ್ರಮವಲ್ಲ, ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸುವ ಸಂಸ್ಕೃತಿಯ ಹಬ್ಬವಾಗಿದೆ. ಸಾಹಿತ್ಯ, ಭಾಷೆ ಮತ್ತು ನಾಡಿನ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.
‘ಕನ್ನಡ ಸಾಹಿತ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಅವರು ತಿಳಿಸಿದರು.
ಗೌರವ ಕಾರ್ಯದರ್ಶಿಗಳಾದ ಎ.ಪಿ. ವೀರರಾಜು ಮತ್ತು ಜ್ಯೋತಿ ಅರುಣ್, ಖಜಾಂಚಿ ಕೆ.ಪಿ. ದಿನೇಶ್, ಮಾಜಿ ಅಧ್ಯಕ್ಷ ಎಚ್.ಜೆ. ಜವರಪ್ಪ, ಹೋಬಳಿ ಅಧ್ಯಕ್ಷರಾದ ನಂಗಾರು ಕೀರ್ತಿಪ್ರಸಾದ್ ಮತ್ತು ಸಿ.ಎಸ್. ನಾಗರಾಜು, ಹಿರಿಯರಾದ ತಿಮ್ಮಶೆಟ್ಟಿ, ಸುಮಾ ಸುದೀಪ್, ಅನಿತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.