ADVERTISEMENT

ಗೋಹತ್ಯೆ: ಕ್ರಮಕ್ಕೆ ವಿಶೇಷ ಕಾರ್ಯಪಡೆ ಚಿಂತನೆ

ಕೊಡಗಿನಲ್ಲಿ 3ನೇ ಎಎನ್‌ಎಫ್‌ ಕ್ಯಾಂಪ್‌: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 17:02 IST
Last Updated 6 ನವೆಂಬರ್ 2020, 17:02 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮಡಿಕೇರಿ:‘ಅಕ್ರಮವಾಗಿ ಗೋವು ಸಾಗಣೆ ಹಾಗೂ ಗೋಹತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯಪಡೆ ರಚಿಸಲು ಚಿಂತಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಇಲ್ಲಿ ಹೇಳಿದರು.

ಅಕ್ರಮವಾಗಿ ಗೋವುಗಳ ಸಾಗಣೆ, ಗೋಹತ್ಯೆ ತಡೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಯಿದೆ. ಕೆಲ ಸ್ವಯಂ ಸೇವಾ ಸಂಸ್ಥೆಗಳೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸಮಿತಿಯು ನಿಯಮಿತವಾಗಿ ಸಭೆ ನಡೆಸಬೇಕು. ಸಭೆಯ ಸಲಹೆ, ಸೂಚನೆಯಂತೆ ಕ್ರಮ ಕೈಗೊಂಡು ಅಕ್ರಮ ತಡೆಯಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತಮಿಳುನಾಡು, ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಕಂಡುಬಂದಿದ್ದು, ರಾಜ್ಯದಲ್ಲೂ ಮುಂಜಾಗ್ರತೆ ವಹಿಸಲಾಗಿದೆ. ಕೊಡಗಿನಲ್ಲಿ ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ಎರಡು ಕ್ಯಾಂಪ್‌ಗಳಿದ್ದು, ಶೋಧ ಕಾರ್ಯಕ್ಕೆ ನೆರವಾಗಲು ಮತ್ತೊಂದು ಎಎನ್‌ಎಫ್‌ ಕ್ಯಾಂಪ್‌ಗೆ ಅನುಮತಿ ನೀಡಲಾಗಿದೆ’ ಎಂದೂ ಮಾಹಿತಿ ನೀಡಿದರು.

ADVERTISEMENT

‘ಗಡಿಯಾಚೆಗೆ ನಡೆಯುತ್ತಿರುವ ನಕ್ಸಲ್‌ ಚಟುವಟಿಕೆ ಪರಿಣಾಮ ರಾಜ್ಯದ ಮೇಲೂ ಆಗುತ್ತಿದ್ದು, ನಿಗಾ ವಹಿಸಲು ಗಡಿ ಜಿಲ್ಲೆಗಳ ಪೊಲೀಸರಿಗೆ ಸೂಚಿಸಲಾಗಿದೆ. ಕೊಡಗಿನಲ್ಲಿ 3ನೇ ಕ್ಯಾಂಪ್‌ ಸ್ಥಾಪನೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ಇದೇ 3ರಂದು ವಯನಾಡು ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಕೊಡಗಿನ ಗಡಿಯಲ್ಲಿ ಶೋಧ ಕಾರ್ಯ ಚುರುಕು ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.