ADVERTISEMENT

‘ಕ್ರೀಡಾಕೂಟ ಬಾಂಧವ್ಯ ಬೆಸೆಯಲು ಸಹಕಾರಿ’

ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್

​ಪ್ರಜಾವಾಣಿ ವಾರ್ತೆ
Published 10 ಮೇ 2025, 8:13 IST
Last Updated 10 ಮೇ 2025, 8:13 IST
ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಜಂಟಿ ಆಶ್ರಯದಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 14ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ತಮವನ್ನು ಸಂತ ಅಂತೋಣಿ ದೇವಾಲಯದ ರೆ.ಫಾ‌.ವಿಜಯಕುಮಾರ್ ಉದ್ಘಾಟಿಸಿದರು.
ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಜಂಟಿ ಆಶ್ರಯದಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 14ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ತಮವನ್ನು ಸಂತ ಅಂತೋಣಿ ದೇವಾಲಯದ ರೆ.ಫಾ‌.ವಿಜಯಕುಮಾರ್ ಉದ್ಘಾಟಿಸಿದರು.   

ಸುಂಟಿಕೊಪ್ಪ: ‘ಕ್ರೀಡಾಕೂಟದ ಮೂಲಕ ಎಲ್ಲರೂ ಒಂದೆಡೆ ಸೇರಿ ಒಂದೇ ಮನೆಯ ಮಕ್ಕಳಂತೆ ಸೌಹಾರ್ದತೆ, ಪರಸ್ಪರ ಪ್ರೀತಿ, ವಿಶ್ವಾಸ ಹಂಚಿಕೊಳ್ಳಲು ಸುಂದರ ವೇದಿಕೆಯಾಗಿದೆ. ಕ್ರೀಡೆ ನಮ್ಮಲ್ಲಿ ಒಗ್ಗಟ್ಟು ಮೂಡಿಸುತ್ತದೆ. ಭಾಂದವ್ಯ ಇನ್ನಷ್ಟು ಬೆಸೆದುಕೊಳ್ಳುತ್ತದೆ‌‌’ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮ ಗುರು ವಿಜಯಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಟಿ.ಸಂತ ಅಂತೋಣಿ ದೇವಾಲಯದ ಜಂಟಿ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 14ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೂರದ ಊರಿನಿಂದ ಬಂದವರೊಂದಿಗೆ ಸಂಘಟನೆ ಪ್ರಾಧಾನ್ಯತೆ ದೊರಕಲಿದೆ. ನಾವೆಲ್ಲಾ ಒಂದೇ ಎಂಬ ಮನೋಭಾವ ಮೂಡಲಿದೆ. ಹಾಗಾಗಿ ಕ್ರೀಡಾ ಮನೋಭಾವದೊಂದಿಗೆ ಟೂರ್ನಿ ಆಡುವುದರ ಮೂಲಕ ಕ್ರೀಡಾ ಮನೋಭಾವ ತೋರಿಸಬೇಕೆ ಹೊರತು ಸೋಲು ಗೆಲುವಿನ ಲೆಕ್ಕಾಚಾರ ಮಾಡಬಾರದು’ ಎಂದರು.

ADVERTISEMENT

ಸುಂಟಿಕೊಪ್ಪ ಕಾಂಗ್ರೆಸ್ ಮುಖಂಡ ಪಿ.ಎಂ.ಲತೀಫ್ ಮಾತನಾಡಿ, ‘ಕ್ರೈಸ್ತ ಜನಾಂಗದವರು ಸುಂಟಿಕೊಪ್ಪದಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಸಂಘಟನೆಗೆ ಕೊಟ್ಟ ಕೊಡುಗೆಯಾಗಿದೆ‌. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಿಡುವು ಮಾಡಿಕೊಂಡು ಈ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ತಾವೆಲ್ಲರೂ ಭಾಗವಹಿಸಿ ಸೌಹಾರ್ದಯುತವಾದ ಮತ್ತು ಕ್ರೀಡಾ ಮನೋಭಾವನೆಗಾಗಿ ಸೇರಬೇಕು’ ಎಂದರು. ಅಲ್ಲದೆ, ಅಂತಿಮ ಪಂದ್ಯದಲ್ಲಿ ಜಯಗಳಿಸುವ ತಂಡಕ್ಕೆ ₹5ಸಾವಿರ ನಗದು ಬಹುಮಾನ ಘೋಷಿಸಿದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿದರು.

ಹೆಚ್ಚಿನ ಕ್ರೈಸ್ತ ಯುವಕರು ಕೇವಲ ನಾಮಕಾವಸ್ಥೆಗೆ ಮಾತ್ರ ಶಿಕ್ಷಣ ಪಡೆಯದೆ ಎಲ್ಲರೂ ಉನ್ನತ ಹುದ್ದೆಗಳಲ್ಲಿ ಸೇರುವ ಪಣ ತೊಡಬೇಕು‌. ಅಲ್ಲದೆ ರಾಜಕೀಯದಲ್ಲಿ ಒಬ್ಬ ಕಾರ್ಯಕರ್ತನಾಗಿ ತಾವು ಗುರುತಿಸಿಕೊಳ್ಳಬೇಕೆಂದು ಯುವಕರಲ್ಲಿ ಮನವಿ ಮಾಡಿಕೊಂಡರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಹೆಚ್ಚು ಅಂಕಗಳಿಸಿದ ಕ್ರೈಸ್ತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು.

ವೇದಿಕೆಯಲ್ಲಿ ಟಿಂಬರ್ ವ್ಯಾಪಾರಿಗಳು ಹಾಗೂ ಸಿಎಸ್ಐ ದೇವಾಲಯ ಧರ್ಮಗುರು ಚೆಟ್ಟಳ್ಳಿ ಚರ್ಚಿನ ಧರ್ಮ ಗುರು ಜೆರಾಲ್ಡ್ ಸಿಕ್ವೇರಾ, ಸುಂಟಿಕೊಪ್ಪ ಸಿಎಸ್ಐ ಚರ್ಚಿನ ಧರ್ಮ ಗುರು ಮಧು ಕಿರಣ್, ಸುಂಟಿಕೊಪ್ಪ ಸಂತ ಅಂತೋಣಿ ಸುಪೀರಿಯರ್ ಜೋವಿಟಾ, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ರೆ.ಫಾ‌.ಗಿಲ್ಬರ್ಟ್ ಡಿಸಿಲ್ವಾ, ಸೋಮವಾರಪೇಟೆ ಓಎಲ್‌‌‌ವಿ ಚರ್ಚಿನ ಧರ್ಮಗುರು ಅವಿನಾಶ್, ಜಿಲ್ಲಾ ಸಂಘದ ಗೌರವ್ಯಾಸ ಜೋಕಿಂ ವಾಸ್, ಕಾರ್ಯಾಧ್ಯಕ್ಷ ಲಾರೆನ್ಸ್, ಕಾರ್ಯದರ್ಶಿ ಜೂಡಿ ಡೇವಿಡ್ ವಾಸ್, ಖಜಾಂಚಿ ಜೇಮ್ಸ್ ಡಿಸೋಜಾ, ಪಿ.ಎಫ್‌‌‌.ಸಭಾಸ್ಟೀನ್, ಎಂ.ಬಿ‌.ವಿನ್ಸೆಂಟ್, ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ ‌ನಡೆದ ಜಿಲ್ಲಾ ಮಟ್ಟದ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಗೆ ಟಿಂಬರ್ ವ್ಯಾಪಾರಿಗಳು ಹಾಗೂ ಸಿಎಸ್ಐ ಚರ್ಚಿನ ವಿಲಿಯಂ ಚಾಲನೆ ನೀಡಿದರು.

ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 25 ಧರ್ಮ ಕೇಂದ್ರಗಳ 25 ತಂಡಗಳು ಭಾಗವಹಿಸಿವೆ. ಮೂರು ದಿನ ನಡೆಯುವ ಈ ಕ್ರೀಡಾಕೂಟ ಭಾನುವಾರ ಸಂಜೆ ಮುಕ್ತಾಯಗೊಳ್ಳಲಿದೆ‌‌.

ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರಾಡ್ರಿಗಸ್ ಮಾತನಾಡಿ ‘ಒಂದು ಸಂಘ ಕಟ್ಟುವುದು ಕಷ್ಟ. ಕೊಡಗಿನಲ್ಲಿ 14 ವರ್ಷಗಳಿಂದ ಬಹಳ ಪ್ರಬಲವಾಗಿ ಮುಂದುವರಿಸಿಕೊಂಡು ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನದೊಂದಿಗೆ ಕ್ರೀಡಾಕೂಟ ಮಾಡುತ್ತಿರುವುದು ಸಂತೋಷ ತಂದಿದೆ‌. ಇದರೊಂದಿಗೆ ಕ್ರೈಸ್ತ ಯುವಕ ಯುವತಿಯರು 18 ವರ್ಷ ತುಂಬಿದ ನಂತರ ರಾಜಕೀಯ ಅಥವಾ ಸರ್ಕಾರಿ ಹುದ್ದೆಯಲ್ಲಿ ಸೇರ್ಪಡೆಗೊಂಡಲ್ಲಿ ಮಾತ್ರ ತಮ್ಮನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.