ADVERTISEMENT

17ರಂದು ಕುಶಾಲನಗರದ ಬಸವನಹಳ್ಳಿಯಲ್ಲಿ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 11:34 IST
Last Updated 13 ನವೆಂಬರ್ 2019, 11:34 IST

ಮಡಿಕೇರಿ: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನ.17ರಂದು ಕುಶಾಲನಗರದ ಬಸವನಹಳ್ಳಿ ಪ್ರೌಢಶಾಲೆಯ ಮೈದಾನದಲ್ಲಿ ಜಿಲ್ಲಾಮಟ್ಟದ ವೀರಶೈವ ಲಿಂಗಾಯತ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಮಹೇಶ್ ತಿಳಿಸಿದರು.

ಅಂದು ಬೆಳಿಗ್ಗೆ 8ಕ್ಕೆ ಕುಶಾಲನಗರದ ಕೊಪ್ಪಗೇಟ್ ಸಮೀಪದ ಕಾವೇರಿ ಪ್ರತಿಮೆ ಬಳಿಯಿಂದ ಕ್ರೀಡಾ ಜ್ಯೋತಿಯೊಂದಿಗೆ ಬೈಕ್ ಜಾಥಾ ಆರಂಭಗೊಳ್ಳಲಿದೆ. ಜಾಥಾಕ್ಕೆ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 9ಕ್ಕೆ ಕ್ರೀಡಾಕೂಟವನ್ನು ಬೆಂಗಳೂರಿನ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾ ತರಬೇತುದಾರ ದೇವರಾಜಮ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಹಾಕಿ ಕ್ರೀಡಾಪಟು ಡಾ.ಸಿಂಧು ಭರತ್, ಅಂತರರಾಷ್ಟ್ರೀಯ ಸೈಕ್ಲಿಂಗ್‌ ಪಟು ಕೆ.ಎನ್.ರಜನೀಶ್, ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಮಾಹಿತಿ ಮತ್ತು ಹಕ್ಕು ಆಯೋಗದ ನಿವೃತ್ತ ಆಯುಕ್ತರು ವಿರೂಪಾಕ್ಷಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ನಿಧಾನ ಸೈಕಲ್ ಚಾಲನೆ, ಪುರುಷ ಹಾಗೂ ಮಹಿಳೆಯರಿಗೆ ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ವಿಷದ ಚೆಂಡು, ಸಂಗೀತ ಖುರ್ಚಿ, ನಡಿಗೆ ಸ್ಪರ್ಧೆ ಸೇರಿದಂತೆ ಇತ್ಯಾದಿ ಕ್ರೀಡಾಕೂಟ ನಡೆಯಲಿದೆ. ಮಾಹಿತಿಗಾಗಿ ಎಸ್.ಮಹೇಶ್ ಮೊಬೈಲ್‌: 94810 59223 ಸಂಪರ್ಕಿಸಬಹುದು ಎಂದು ತಿಳಿಸಿದರು.

ADVERTISEMENT

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಕುಶಾಲನಗರದ ರೈತ ಸಹಕಾರ ಭವನದಲ್ಲಿ ಡಿ.25ರಂದು ಪ್ರತಿಭಾ ಮತ್ತು ಕ್ರೀಡಾ ಪುರಸ್ಕಾರ ನಡೆಯಲಿದೆ. ಮುಂದಿನ ಪೀಳಿಗೆಯ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆಯ ಕಲ್ಲುಮಠದ ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಶನಿವಾರಸಂತೆ ಮುದ್ದಿನಕಟ್ಟೆ ಮಠ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೋರು ವಿರಕ್ತಮಠದ ಮಶ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ವಿವರಿಸಿದರು.

‌ಪತ್ರಿಕಾಗೋಷ್ಠಿಯಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾಧ್ಯಕ್ಷ ಎಚ್.ವಿ.ಶಿವಪ್ಪ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಉದಯ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.