
ಕುಶಾಲನಗರ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಫಲಿತಾಂಶ ಉತ್ತಮಪಡಿಸಲು ಶಿಕ್ಷಣ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದ್ದು, ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರೂ (ಅಭಿವೃದ್ಧಿ) ಆದ ಕೂಡಿಗೆ ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಹೇಳಿದರು.
ಸಮೀಪದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಇಲಾಖೆ ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆವತಿಯಿಂದ ಶಿಕ್ಷಕ ಶಿಕ್ಷಣ ಯೋಜನೆಯಡಿ ಇಲಾಖೆಯ ಅನುಷ್ಠಾನ ಆಧಿಕಾರಿಗಳು ಹಾಗೂ ಜಿಲ್ಲಾ ಸರ್ಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಗುರುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-1 ರ ಫಲಿತಾಂಶ ವಿಶ್ಲೇಷಣೆ ಕುರಿತು ಏರ್ಪಡಸಿದ್ದ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ಕುರಿತು ಅವರು ಮಾತನಾಡಿದರು.
‘ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಸಲಹೆಗಳನ್ನು ನೀಡಿದ ಅವರು, ‘ಕಳೆದ ವರ್ಷ ಜಿಲ್ಲೆಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ 1ರಿಂದ 2ನೇ ಸ್ಥಾನಕ್ಕೆ ಏರಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ದಿಟ್ಟ ಹೆಜ್ಜೆ ಇಟ್ಟು ಹೆಚ್ಚಿನ ಪರಿಶ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.
‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಲು ಪೂರ್ವಭಾವಿ ಪರೀಕ್ಷೆಗಳತ್ತ ಹೆಚ್ಚು ಕಾಳಜಿ ವಹಿಸಬೇಕು. ಯಾವುದೇ ವಿದ್ಯಾರ್ಥಿಯು ಅನುತ್ತೀರ್ಣ ಆಗದಂತೆ ನೋಡಿಕೊಳ್ಳಬೇಕು’ ಎಂದರು.
‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶವನ್ನು ಉತ್ತಮಪಡಿಸಲು ಪೋಷಕರಲ್ಲಿ ಜಾಗೃತಿ, ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಸ್ಥಳೀಯವಾಗಿ ಸೂಕ್ತವಾಗುವ ಇನ್ನಿತರ ಕಾರ್ಯತಂತ್ರಗಳನ್ನು ಯೋಜಿಸಿ ಜಾರಿಗೊಳಿಸಬೇಕಾಗುತ್ತದೆ’ ಎಂದು ರಾಮಚಂದ್ರರಾಜೇ ಅರಸ್ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ‘ಮೊದಲ ಹಂತದ ಪೂರ್ವಸಿದ್ಧತಾ ಪರೀಕ್ಷೆ-1ರಲ್ಲಿ ಕಡಿಮೆ ಅಂಕಗಳಿಸಿದ ಮಕ್ಕಳಿಗೆ ಹೆಚ್ಚು ಗಮನ ಕೊಡುವ ಮೂಲಕ ಮುಂದಿನ ಹಂತದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.
ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪ ಮಾತನಾಡಿ, ‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ಪ್ರೇರಣಾತ್ಮಕ ಚಟುವಟಿಕೆ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಬೆಳೆಸಬೇಕು’ ಎಂದು ತಿಳಿಸಿದರು.
ತರಬೇತಿ ನೋಡಲ್ ಅಧಿಕಾರಿ ಎಚ್.ಎಚ್.ಸತೀಶ್, ಫಲಿತಾಂಶ ಉತ್ತಮಪಡಿಸುವ ಕುರಿತು, ವಿರಾಜಪೇಟೆ ಬಿಇಒ ಆನಂದ್, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯ ಕ್ರಮಗಳ ಬಗ್ಗೆ ತಿಳಿಸಿದರು.
ತಾಲ್ಲೂಕು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳಾದ ಎಸ್.ಎಸ್.ಶಿವಕುಮಾರ್, ಜೆನೆಟ್, ಕವಿತಾ ಅವರು ಪರೀಕ್ಷೆ - 1ರ ಫಲಿತಾಂಶದ ವಿಶ್ಲೇಷಣೆ ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಗೋಪಾಲಕೃಷ್ಣ, ಹ್ಯೂಬರ್ಟ್ ಡಯಾಸ್, ಎಸ್.ಎನ್.ವೇಣುಗೋಪಾಲ್, ಕೃಷ್ಣಚೈತನ್ಯ, ಕೆ.ಮೂರ್ತಿ, ಆನಂದಪ್ಪ, ಮಾರುತಿ ಅರೇರ, ಬಿಂದು ಅವರು ಪರೀಕ್ಷೆಗೆ ಮಕ್ಕಳನ್ನು ಸಿದ್ಧತೆಗೊಳಿಸುವ ಕುರಿತು ಮಾಹಿತಿ ನೀಡಿದರು.
ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎನ್.ವಿ.ಸ್ವಾಮಿ, ಉಪನ್ಯಾಸಕಿ ಕೆ.ಎಸ್.ನಳಿನಾಕ್ಷಿ , ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾರಿ ಮೋರಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.